ಹೊಟೇಲ್ ಸೀಲ್‌ಡೌನ್ ಎರಡೇ ದಿನಕ್ಕೆ ಸೀಮಿತಗೊಳಿಸಲು ಆಗ್ರಹ

Update: 2020-07-10 12:32 GMT

ಉಡುಪಿ, ಜು.10: ಲಾಕ್‌ಡೌನ್‌ನಿಂದ ಜಿಲ್ಲೆಯ ಹೊಟೇಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಸಂದರ್ಭದಲ್ಲಿ ಹೊಟೇಲನ್ನು ಕೇವಲ ಎರಡು ದಿನಗಳ ಕಾಲ ಮಾತ್ರ ಸೀಲ್ಡೌನ್ ಮಾಡಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ನಿಯೋಗವು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಜೂ.8ರಿಂದ ಹೊಟೇಲ್ ಪುನಾರಂಭಗೊಂಡರೂ ಶೇ.20ರಷ್ಟು ವ್ಯಾಪಾರವಿಲ್ಲದೆ ಉದ್ಯಮವು ಸಂಕಷ್ಟಕ್ಕೆ ಒಳಗಾಗಿದೆ. ಕಟ್ಟಡದ ಬಾಡಿಗೆ, ಸಿಬಂದಿಗಳ ಸಂಬಳ, ವಿದ್ಯುತ್ ಬಿಲ್, ಜಿಎಸ್‌ಟಿ ಮೊದಲಾದ ತೆರಿಗೆಗಳಿಂದ ಹೊಟೇಲ್ ಉದ್ಯಮ ಮುಚ್ಚುವ ಸ್ಥಿತಿಯಲ್ಲಿದೆ. ಇದರ ನಡುವೆ ಸಿಬಂದಿಗಳ ಕೊರೋನ ಪಾಸಿಟಿವ್‌ನಿಂದಾಗಿ ಹೊಟೇಲ್‌ಗೆ ಗ್ರಾಹಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಅತೀಯಾದ ತೆರಿಗೆ ಹಾಗೂ ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಹೊಟೇಲ್ ಉದ್ಯಮವು ಕುಸಿದಿದೆ. ಇವೆಲ್ಲದರ ಮಧ್ಯೆ ನಗರದಲ್ಲಿ ಮೊಬೈಲ್ ಕ್ಯಾಂಟೀನ್‌ಗಳು ಯಾವುದೇ ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸದೆ ಕಾರ್ಯಚರಿಸುತ್ತಿವೆ. ಇದರ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ದೂರು ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ನಿಯೋಗ ಮನವಿಯಲ್ಲಿ ದೂರಿದೆ.

ನಿಯೋಗದಲ್ಲಿ ಸಂಘದ ಅಧ್ಯಕ್ಷ ತಲ್ಲೂರ್ ಶಿವರಾಮ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್ ಭಟ್, ಉಪಾಧ್ಯಕ್ಷರಾದ ಡಯಾನ ವಿಠಲ್ ಪೈ, ಲಕ್ಷ್ಮಣ್ ಜಿ.ನಾಯಕ್, ವ್ಯವಸ್ಥಾಪಕ ಅಶೋಕ್ ಬಿ.ಪೈ, ಶ್ರೀಧರ್ ಭಟ್, ಕಾಶಿರಾಮ್ ಪೈ, ಸಂದೀಪ್ ನಾಯಕ್, ಶಿವಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ದಿಲ್ಲೇಶ್ ಶೆಟ್ಟಿ, ಉಲ್ಲಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News