'ಕಾರ್ಮಿಕರ ಹಕ್ಕುಗಳ ಮೇಲೆ ಸರಕಾರದ ನಿರಂತರ ಆಕ್ರಮಣಕಾರಿ ದಾಳಿ ವಿರುದ್ಧ ರಾಷ್ಟ್ರವ್ಯಾಪ್ತಿ ಪ್ರತಿಭಟನೆ'

Update: 2020-07-10 12:38 GMT

ಉಡುಪಿ, ಜು.10: ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳಲ್ಲಿ ಮಾಡುತ್ತಿರುವ ನಿರಂತರ ಬದಲಾವಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಇತ್ತೀಚೆಗೆ ಜಿಲ್ಲೆಯ ವಿವಿದೆಡೆಗಳಲ್ಲಿ ಧರಣಿ ನಡೆಸಿವೆ ಎಂದು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಮಿಕರು 150ಕ್ಕೂ ವರ್ಷಗಳ ಹೋರಾಟದಲ್ಲಿ ಗೆದ್ದು ಪಡೆದ ಹಕ್ಕುಗಳನ್ನು ಸಹ ಕೇಂದ್ರ ಸರಕಾರ ರದ್ದು ಪಡಿಸುತ್ತಿದೆ. ಇದನ್ನು ವಿರೋಧಿಸಿ ಸಮಿತಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಪ್ರಮುಖ ಕೇಂದ್ರಗಳಲ್ಲಿ, ಕಾರ್ಖಾನೆ, ಬ್ಯಾಂಕುಗಳು ಮತ್ತು ವಿಮಾ ಕಚೇರಿಗಳ ಮುಂದೆ ವಿವಿಧ ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಕರಪತ್ರ ಹಂಚಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅದು ಹೇಳಿದೆ.

ಮುಂಚೂಣಿಯ ಆರೋಗ್ಯ ಕೊರೋನ ವಾರಿಯರ್‌ಗಳನ್ನು ಖಾಯಂಗೊಳಿಸಿ ಅವರಿಗೆ ಪೂರ್ಣ ವೇತನ ನೀಡಿ. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಆರು ತಿಂಗಳವರೆಗೆ ಮಾಸಿಕ 7,500ರೂ. ನಗದು ವರ್ಗಾವಣೆ ಮಾಡಿ, ಯೋಜನಾ ಕಾರ್ಮಿಕರಿಗೆ ಕೊರೋನಾ ಕೆಲಸಕ್ಕೆ ಪ್ರೋತ್ಸಾಹಧನ ನೀಡಿ, ಎಲ್ಲಾ ವಿಭಾಗಗಳ ಕಾರ್ಮಿಕರಿಗೆ ಪೂರ್ಣ ವೇತನದೊಂದಿಗೆ ಉದ್ಯೋಗ ನೀಡಿ ಹಾಗೂ ಲಾಕ್‌ಡೌನ್ ಅವಧಿಗೂ ಪೂರ್ಣವೇತನದೊಂದಿಗೆ ಉದ್ಯೋಗ ನೀಡಬೇಕು.

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಎಲ್ಲಾ ಕಾರ್ಮಿಕರಿಗೂ ಕನಿಷ್ಠ ಆರು ತಿಂಗಳ ಪಡಿತರವನ್ನು ನೀಡಬೇಕು. ಕೋವಿಡ್-19ನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಿ ಕಾನೂನು ಮತ್ತು ಸುವ್ಯವಸ್ಥೆಯ ಭಾಗವಾಗಿ ಪರಿಗಣಿಸಬೇಕು.

ಖಾಸಗೀಕರಣಗಳನ್ನು ಕೂಡಲೇ ನಿಲ್ಲಿಸಬೇಕು, ವಿದ್ಯುತ್ ತಿದ್ದುಪಡಿ ಮಸೂದೆ-2020ನ್ನು ಕೈಬಿಡಬೇಕು. ಕಾರ್ಪೋರೇಟ್-ಭೂಮಾಲಕರಿಗೆ ಅನುಕೂಲಕರವಾದ ಕೃಷಿ ಆರ್ಥಿಕತೆಯಲ್ಲಿ ರೈತ ವಿರೋಧಿ ಬದಲಾವಣೆಗಳನ್ನು ಕೈಬಿಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಯ ವೇಳೆ ಒತ್ತಾಯಿಸಲಾಯಿತು ಎಂದು ಜಂಟಿ ಸಮಿತಿಯ ಸಂಚಾಲಕ ಕೆ.ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News