ಕ್ರಿಯಾಶೀಲತೆ, ಬದ್ಧತೆಯಿಂದ ಜವಾಬ್ದಾರಿ ನಿರ್ವಹಿಸೋಣ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ

Update: 2020-07-10 12:41 GMT

ಉಡುಪಿ, ಜು.10: ಭಾರತೀಯ ಜನತಾ ಪಾರ್ಟಿ,ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷವಾಗಿದ್ದು, ಕಾರ್ಯಕರ್ತರೇ ಪಕ್ಷದ ಜೀವಾಳ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಹಲವಾರು ಜನಪ್ರಿಯ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಗುರುತರವಾದ ಜವಾಬ್ದಾರಿ ಸಮಸ್ತ ಕಾರ್ಯಕರ್ತರ ಮೇಲಿದೆ.

ಕೊರೋನ ಸಂಕಷ್ಟದ ನಡುವೆಯೂ ಜನತೆಯ ನೈಜ ಸಮಸ್ಯೆಗಳಿಗೆ ಸ್ಪಂದಿಸಿ ಕ್ರಿಯಾಶೀಲತೆ ಹಾಗೂ ಬದ್ಧತೆಯಿಂದ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಶುಕ್ರವಾರ ನಗರದ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ, ಮಂಡಲ ಮತ್ತು ಮೋರ್ಚಾಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡುತಿದ್ದರು.

ರಾಜ್ಯ ಬಿಜೆಪಿಯ ಸೂಚನೆಯಂತೆ ಜಿಲ್ಲಾ ಮತ್ತು ಮಂಡಲ ಮಟ್ಟದ ಪ್ರತಿಯೊಂದು ಸಂಘಟನಾ ಚಟುವಟಿಕೆಗಳ ಡಿಜಿಟಲೀಕರಣ ನಡೆಯಲಿದೆ. ಈ ಬಗ್ಗೆ ಸೂಕ್ತ ದಾಖಲೀಕರಣ ಪ್ರಕ್ರಿಯೆ ನಡೆಸಬೇಕಿದೆ. ಪ್ರತೀ ಬೂತ್ ಮಟ್ಟದಲ್ಲಿ ಕನಿಷ್ಠ 100 ಮತ್ತು ಜಿಲ್ಲಾ ಮಂಡಲ ಮೋರ್ಚಾ ಪದಾಧಿಕಾರಿಗಳು ಕನಿಷ್ಠ 50 ಮನೆಗಳ ಸಂಪರ್ಕ ಅಭಿಯಾನದೊಂದಿಗೆ ಮೋದಿ ಸರಕಾರ 2.0 ಸಾಧನೆಯ ಪತ್ರ ಹಾಗೂ ಮೋದಿ ಪತ್ರವನ್ನು ತಲುಪಿಸುವುದರ ಜೊತೆಗೆ ಪ್ರತೀ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಸದೃಢಗೊಳಿಸಬೇಕು ಎಂದರು.

ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿ ಬಿಜೆಪಿ ಇಂದು ಗ್ರಾಮ ಮಟ್ಟದಿಂದ ಕೇಂದ್ರ ಸರಕಾರದವರೆಗಿನ ಎಲ್ಲಾ ಸ್ತರಗಳಲ್ಲಿ ಅಧಿಕಾರವನ್ನು ಹೊಂದಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸವಾಲು ಪಕ್ಷದ ಮುಂದಿದೆ. ಈ ನಿಟ್ಟಿನಲ್ಲಿ ಮುಂಬರಲಿರುವ ಗ್ರಾಮಪಂಚಾಯತ್ ಸಹಿತ ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಪ್ರಚಂಡ ವಿಜಯ ಸಾಧಿಸುವ ದೃಢ ಸಂಕಲ್ಪದೊಂದಿಗೆ ಮುಂದಡಿ ಇಡಬೇಕಿದೆ ಎಂದರು.

ಬಿಜೆಪಿ ಜಿಲ್ಲಾ, ಮಂಡಲ, ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News