ಮಂಗಳೂರು: ಕೊರೋನ ವರದಿಗಾಗಿ ಕಾದು ಮೃತದೇಹವನ್ನು ಮನೆಯಲ್ಲಿಟ್ಟು ಒಂದು ದಿನ ಕಳೆದ ಕುಟುಂಬಸ್ಥರು!

Update: 2020-07-10 13:26 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.9: ಕೊರೋನ ಸೋಂಕು ತೀವ್ರಗೊಳ್ಳುತ್ತಿರುವಂತೆಯೇ ಜನಸಾಮಾನ್ಯರ ಪರದಾಟವೂ ತೀವ್ರವಾಗುತ್ತಿದೆ. ಒಂದೆಡೆ ಇತರ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ಕುಟುಂಬವೊಂದು ಮೃತ ಮಹಿಳೆಯೊಬ್ಬರ ಕೊರೋನ ಸೋಂಕಿನ ವರದಿಗಾಗಿ ಕಾದು ಮನೆಯಲ್ಲಿ ಮೃತದೇಹವನ್ನು ಒಂದು ದಿನ ಇರಿಸಿಕೊಂಡ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಸುರತ್ಕಲ್ ಕೃಷ್ಣಾಪುರದ 75ರ ಹರೆಯದ ವೃದ್ಧೆಯೊಬ್ಬರನ್ನು ಕೆಲ ದಿನಗಳ ಹಿಂದೆ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ವಾತದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹಲವು ಸಮಯದಿಂದ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಈ ಬಾರಿ ಆಸ್ಪತ್ರೆಗೆ ಹೋದಾಗ ಕೋವಿಡ್ 19 ತಪಾಸಣೆ ವರದಿ ತರುವಂತೆ ಹಿಂದಕ್ಕೆ ಕಳುಹಿಸಲಾಯಿತು ಎನ್ನಲಾಗಿದೆ. ಅದರಂತೆ ಮನೆಯವರು ವೃದ್ಧೆಯನ್ನು ಜುಲೈ 8ರಂದು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ಗಂಟಲ ದ್ರವದ ಮಾದರಿಯನ್ನು ಒದಗಿಸಿ ಮನೆಗೆ ಕರೆದೊಯ್ದರು. ಆದರೆ ಜು. 9ರಂದು ಸಂಜೆಯ ವೇಳೆಗೆ ವೃದ್ಧೆ ಮೃತಪಟ್ಟಿದ್ದಾರೆ. ಜು. 10ರ ಸಂಜೆಯವರೆಗೆ ಕುಟುಂಬ ಮೃತದೇಹವನ್ನು ಮನೆಯಲ್ಲಿ ಇರಿಸಿ ಕೋವಿಡ್ ತಪಾಸಣೆಯ ವರದಿಗಾಗಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಒಂದೆಡೆ ಮನೆಯಲ್ಲಿ ಮೃತದೇಹವನ್ನು ಒಂದಿಡೀ ದಿನ ಇರಿಸಿಕೊಂಡು ಕಾಯಬೇಕಾದ ಮನೆಯವರ ಅಸಹಾಯಕತೆಯ ನಡುವೆ ವರದಿಗಾಗಿ ಲ್ಯಾಬ್ ನೆದುರು ಕಾಯುವ ಪರಿಸ್ಥಿತಿಯೂ ಇತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ವರದಿಗಾಗಿ ನಿನ್ನೆಯಿಂದ ಇಂದು ಸಂಜೆಯವರೆಗೆ ಕುಟುಂಬಸ್ಥರು ಕಾಯಬೇಕಾಯಿತು.

ಅಂತೂ ಇಂದು ಶುಕ್ರವಾರ 6 ಗಂಟೆಯ ಸುಮಾರಿಗೆ ಕೊರೋನ ತಪಾಸಣೆ ವರದಿ ಬಂದಿದ್ದು, ಮೃತ ವೃದ್ಧೆ ಕೊರೋನ ಪಾಸಿಟಿವ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News