ಆನ್ ಲೈನ್ ಶಿಕ್ಷಣದ ಬಗ್ಗೆ ಮಾಜಿ ಸಚಿವರ ಸಭೆ: ಸಚಿವ ಸುರೇಶ್ ಕುಮಾರ್

Update: 2020-07-10 13:30 GMT

ಬಂಟ್ವಾಳ, ಜು.10: ಆನ್ ಲೈನ್ ಶಿಕ್ಷಣದ ಬಗ್ಗೆ ಪೋಷಕರಿಂದ ಈಗಾಗಲೇ ಸಾಕಷ್ಟು ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಶಿಕ್ಷಣ ಸಚಿವರ ಸಭೆ ಕರೆದು ಚರ್ಚಿಸಲಾಗುವುದು.‌ ಸಭೆಯಲ್ಲಿ ನಡೆದ ಚರ್ಚೆಯ ಅನುಸಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕೊರೋನ ಆತಂಕದ ನಡುವೆಯೂ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರು ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಗೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. 

ಕೊರೋನ ವೈರಸ್ ಆತಂಕದ ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೊಮ್ಮೆ ಪೋಷಕರ ಅಭಿಪ್ರಾಯ ಸಂಗ್ರಹಿಸಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೆಯೇ ಖಾಸಗಿ ಶಾಲೆಗಳ ಶಿಕ್ಷಕರ ಆರ್ಥಿಕ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರಕಾರಿ ಶಿಕ್ಷಕರ ತಿಂಗಳ ಎರಡು ದಿನದ ವೇತನವನ್ನು ಕಡಿತಗೊಳಿಸಿ ಖಾಸಗಿ ಶಾಲೆಗಳ ಶಿಕ್ಷಕರಿಗೆ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ಸಂಘದ ಆಧ್ಯಕ್ಷರನ್ನು ಕರೆದು ಮಾತುಕತೆ ನಡೆಸಿದ್ದು, ಅವರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಎಸೆಸೆಲ್ಸಿ ಪರೀಕ್ಷೆಯನ್ನು ಕಾಲಿನಲ್ಲಿ ಬರೆದ ಕೌಶಿಕ್ ನನ್ನು ಸಚಿವರು ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಭೇಟಿಯಾಗಿ ಉಭಯ ಕುಶಲೋಪಚಾರಿ ನಡೆಸಿದರು. ನಮಗೆ ನೀನೆ ಸ್ಪೂರ್ತಿ. ನಿನ್ನ ಸಾಧನೆಯ ಕುರಿತು ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೆ ಎಂದ‌ ಅವರು, ತನ್ನ ಸಹಾಯಕನನ್ನು ಕರೆದು ಪೋಟೊ ತೆಗೆಸಿಕೊಂಡರು. 

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಪರೀಕ್ಷೆ ವೇಳೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ ಬಂಟ್ವಾಳ ತಾಲೂಕಿನ ಶಿಕ್ಷಕರ ತಂಡವನ್ನು ಅಭಿನಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News