10 ಕೋಟಿ ವೆಚ್ಚದಲ್ಲಿ ಏಳು ಕಾಮಗಾರಿ ಪೂರ್ಣ: ಮಂಗಳೂರು ಸ್ಮಾರ್ಟ್‌ಸಿಟಿ ಎಂಡಿ ಮುಹಮ್ಮದ್ ನಝೀರ್

Update: 2020-07-10 14:16 GMT

ಮಂಗಳೂರು, ಜು.10: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿಯವರೆಗೆ 10.62 ಕೋಟಿ ರೂ. ವೆಚ್ಚದಲ್ಲಿ ಏಳು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದ್ದಾರೆ.
ನಗರದ ಪಾಲಿಕೆ ಕಟ್ಟಡದಲ್ಲಿರುವ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 558.78 ಕೋಟಿ ರೂ. ವೆಚ್ಚದಲ್ಲಿ 26 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ನಗರದ ಹೃದಯ ಭಾಗದಲ್ಲಿನ ಕ್ಲಾಕ್ ಟವರ್, ನೆಹರೂ ಮೈದಾನ ಸಮೀಪದ ಸ್ಮಾರ್ಟ್ ರಸ್ತೆ, ಪಾನ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ಸೌಕರ್ಯ ಮತ್ತು ಇ- ಶೌಚಾಲಯ ಮೊದಲ ಹಾಗೂ ಎರಡನೇ ಹಂತ, ಸ್ಮಾರ್ಟ್ ಸಿಟಿ ಕಚೇರಿ ಒಳಾಂಗಣ ವಿನ್ಯಾಸ ಹಾಗೂ ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ 37 ಬೆಡ್‌ಗಳ ಐಸಿಯು ಪೂರೈಕೆ ಮತ್ತು ಸ್ಥಾಪನೆ, ಸರಕಾರಿ ಕಟ್ಟಡಗಳಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ 26 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇವುಗಳಲ್ಲಿ ಕೆಲವು ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಇನ್ನು ಸುಮಾರು 81 ಕೋಟಿ ರೂ. ವೆಚ್ಚದ ನಾಲ್ಕು ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ. 259.54 ಕೋಟಿ ರೂ. ವೆಚ್ಚದ ಐದು ಕಾಮಗಾರಿಗಳು ಸಮಗ್ರ ಯೋಜನಾ ವರದಿಯ ಹಂತದಲ್ಲಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಅಡಿಯಲ್ಲಿ ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳಿಗೂ ಅವಕಾಶವಿದ್ದು, ಮಂಗಳೂರು ನಗರದಲ್ಲಿ 445 ಕೊಟಿ ರೂ. ವೆಚ್ಚದ ಪಂಪ್‌ವೆಲ್ ಬಸ್ ನಿಲ್ದಾಣ, 79 ಕೋಟಿ ರೂ. ವೆಚ್ಚದ ಹಳೆ ಬಸ್ ನಿಲ್ದಾಣದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, 114 ಕೋಟಿ ರೂ. ವೆಚ್ಚದ ಕೇಂದ್ರ ಮಾರುಕಟ್ಟೆ ಪುನರ್ ನಿರ್ಮಾಣ ಸೇರಿದಂತೆ ಒಟ್ಟು 707 ಕೋಟಿ ರೂ. ವೆಚ್ಚದ ಐದು ಕಾಮಗಾರಿಗಳು ನಿರ್ಮಾಣವಾಗಲಿದೆ ಎಂದರು.

ಪಿಪಿಪಿ ಯೋಜನೆಯಲ್ಲಿ ಸರಕಾರಿ ಕಟ್ಟಡಗಳ ಮೇಲೆ ಸೋಲಾರ್ ಘಟಕಗಳ ಅನುಷ್ಠಾನವೂ ಸೇರಿದೆ. ಸೋಲಾರ್ ಘಟಕಗಳ ಮೂಲಕ ಸುಮಾರು 1,400 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಇಂಟರ್ನ್‌ಶಿಪ್: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಪದವೀಧರರಿಗೆ ‘ದಿ ಅರ್ಬನ್ ಲರ್ನಿಂಗ್ ಇಂಟರ್ನ್‌ಶಿಪ್’ ಪ್ರೋಗ್ರಾಂ ಯೋಜನೆ ಪರಿಚಯಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಸುಮಾರು 300 ಮಂದಿಯನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಈಗಾಗಲೇ ಪದವಿ ಪೂರೈಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಈ ಯೋಜನೆಯಲ್ಲಿ ತಾಂತ್ರಿಕ, ವೈದ್ಯಕೀಯ, ನರ್ಸಿಂಗ್, ಸಮಾಜ ಕಾರ್ಯ ಸೇರಿದಂತೆ ಬೇರೆ ಬೇರೆ ವಲಯಗಳಲ್ಲಿ ಅಧ್ಯಯನ ಮಾಡುವವರಿಗೆ ಅವಕಾಶ ಇದೆ. ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಮೂರು ತಿಂಗಳಿಗೆ ಒಂದು ಬ್ಯಾಚ್‌ನಂತೆ ಅವಕಾಶ ನೀಡಲಿದ್ದೇವೆ. ಅವರಿಗೆ ಅಧಿಕೃತ ಸರ್ಟಿಫಿಕೇಟ್ ಕೂಡ ದೊರೆಯಲಿದೆ. ಆಸಕ್ತರು www.aicte-india.org ಜಾಲತಾಣದ ಮೂಲಕ ನೋಂದಣಿ ಮಾಡಬಹುದು ಎಂದು ಅವರು ಹೇಳಿದರು.

ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ; ಸ್ಪಷ್ಟನೆ
ಮಂಗಳೂರು ಸ್ಮಾರ್ಟ್‌ಸಿಟಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಹಾಗೂ ಟೆಂಡರ್‌ಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮಂಗಳೂರು ಸ್ಮಾರ್ಟ್‌ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಸ್ಪಷ್ಟಪಡಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಲ್ಲ ಯೋಜನೆಗಳು, ಕಾಮಗಾರಿಗಳಿಗೆ ಡಿಪಿಆರ್ ಮಾಡಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಪಿಡಬ್ಲ್ಯುಡಿ ಇಲಾಖೆಯ ಪ್ರಕಾರವೇ ನಡೆಯುತ್ತವೆ. ಇದರಲ್ಲಿ ಅನ್ಯವ್ಯಕ್ತಿಯ ಹಸ್ತಕ್ಷೇಪ ಇರುವುದಿಲ್ಲ. ಅಕ್ರಮ ನಡೆದಿದೆ ಎಂಬ ಆರೋಪ ಹೊರಿಸುವವರು ಕಚೇರಿಗೆ ದಾಖಲೆ ಸಮೇತ ಹಾಜರಾಬೇಕು. ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News