ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 34 ಮಂದಿಗೆ ಕೊರೋನ ಪಾಸಿಟಿವ್

Update: 2020-07-10 15:40 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.10: ಶುಕ್ರವಾರ ಉಡುಪಿ ಜಿಲ್ಲೆಯ ಇನ್ನೂ 34 ಮಂದಿಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಪತ್ತೆಯಾಗಿದೆ. ದಿನದಲ್ಲಿ 34 ಮಂದಿ ಶಂಕಿತರ ಗಂಟಲುದ್ರವ ಮಾದರಿ ಪರೀಕ್ಷೆ ಸೋಂಕಿಗೆ ಪಾಸಿಟಿವ್ ಆಗಿದ್ದರೆ, 673 ಮಂದಿಯ ಮಾದರಿ ನೆಗೆಟಿವ್ ಫಲಿತಾಂಶವನ್ನು ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ ಪಾಸಿಟಿವ್ ಬಂದ 34 ಮಂದಿಯಲ್ಲಿ ವಿದೇಶಗಳಿಂದ ಬಂದ ಮೂವರಿದ್ದಾರೆ. ಇಬ್ಬರು ದುಬೈಯಿಂದ ಬಂದಿದ್ದರೆ, ಒಬ್ಬರು ಕುವೈತ್ ‌ನಿಂದ ಆಗಮಿಸಿ ಇಲ್ಲಿ ಪಾಸಿಟಿವ್ ಬಂದಿದ್ದಾರೆ. ಮೂವರು ಮಹಾರಾಷ್ಟ್ರದಿಂದ ಬಂದವರಾದರೆ, ಇಬ್ಬರು ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದವರು. ಇನ್ನುಳಿದ 26 ಮಂದಿಯೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಸೋಂಕಿತರಲ್ಲಿ ಉಡುಪಿ, ಬ್ರಹ್ಮಾವರ ಮತ್ತು ಕಾರ್ಕಳದ ತಲಾ ನಾಲ್ವರು, ಕಾಪುವಿನ ಐವರು, ಕುಂದಾಪುರದ ಆರು ಮಂದಿ ಹಾಗೂ ಬೈಂದೂರಿನ 11 ಮಂದಿ ಇದ್ದಾರೆ. 22 ಮಂದಿ ಪುರುಷರು, 10 ಮಹಿಳೆಯರು ಹಾಗೂ ತಲಾ ಒಬ್ಬ ಬಾಲಕ-ಬಾಲಕಿ ಸೇರಿದಂತೆ ಇಬ್ಬರು ಮಕ್ಕಳಿಗೆ ಇಂದು ಪಾಸಿಟಿವ್ ಬಂದಿದೆ. ಶುಕ್ರವಾರ ಬಂದ 34 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1477ಕ್ಕೇರಿದೆ.

7 ಮಂದಿ ಗುಣಮುಖ:  ಜಿಲ್ಲೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ಏಳು ಮಂದಿ ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1224ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 250 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇಂದಿನ ಕೋವಿಡ್-19ರ ಪಟ್ಟಿಯಲ್ಲಿ ಬೆಂಗಳೂರು ನಗರ ಶುಕ್ರವಾರ 1447 ಪ್ರಕರಣಗಳೊಂದಿಗೆ ಒಟ್ಟು 15,329 ಸೋಂಕಿತರನ್ನು ಹೊಂದಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಕಲಬುರಗಿ 1959 ಕೇಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ 1840 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಳ್ಳಾರಿ 1554ರೊಂದಿಗೆ ನಾಲ್ಕನೇ, ಉಡುಪಿ 1477 ಪಾಸಿಟಿವ್‌ನೊಂದಿಗೆ ಐದನೇ ಸ್ಥಾನ ಪಡೆದಿವೆ. ಯಾದಗಿರಿ 1094 ಕೇಸು ಹಾಗೂ ಬೀದರ್ 913 ಪ್ರಕರಣಗಳೊಂದಿಗೆ ಆರು ಮತ್ತು ಏಳನೇ ಸ್ಥಾನದಲ್ಲಿವೆ.

698 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶುಕ್ರವಾರ ಇನ್ನೂ 698 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 106 ಮಂದಿ ಇದ್ದರೆ, ಕೋವಿಡ್ ಸಂಪರ್ಕಿತರು ಸಹ 106 ಮಂದಿ ಸೇರಿದ್ದಾರೆ. ಉಸಿರಾಟ ತೊಂದರೆಯ ನಾಲ್ವರು, ಶೀತಜ್ವರದಿಂದ ಬಳಲುವ 54 ಮಂದಿ ಹಾಗೂ ದೇಶ-ವಿದೇಶಗಳ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 698 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 21,409ಕ್ಕೇರಿದೆ. ಇವುಗಳಲ್ಲಿ ಈವರೆಗೆ 17,508 ನೆಗೆಟಿವ್, 1477 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 2424 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 21 ಮಂದಿ ಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಆರು ಮಂದಿ ಕೋವಿಡ್ ಶಂಕಿತರು, 8 ಮಂದಿ ಉಸಿರಾಟ ತೊಂದರೆಯವರು ಹಾಗೂ 7 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 25 ಮಂದಿ ಬಿಡುಗಡೆಗೊಂಡಿದ್ದು, 141 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 26 ಮಂದಿ ಸೇರಿದಂತೆ ಒಟ್ಟು 6136 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1261 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

ಸಾಲಿಗ್ರಾಮ ಪಾರಂಪಳ್ಳಿಯ 2 ಹೊಟೇಲ್ ಕಾರ್ಮಿಕರಿಗೆ ಕೊರೋನ ಪಾಸಿಟಿವ್
ತಾಲೂಕಿನ ಸಾಲಿಗ್ರಾಮದ ಪಾರಂಪಳ್ಳಿಯ ಹೊಟೇಲ್ ಒಂದರ ಇಬ್ಬರು ಕಾರ್ಮಿಕರಲ್ಲಿ ಕೋವಿಡ್-19ರ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸುವುದರೊಂದಿಗೆ ಪಾರಂಪಳ್ಳಿಯಲ್ಲಿರುವ ಹೊಟೇಲ್ ಹಾಗೂ ಒಬ್ಬ ನೌಕರ ವಾಸವಾಗಿದ್ದ ಹಂದಟ್ಟುವಿನ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿ ರಾಜು ತಿಳಿಸಿದ್ದಾರೆ.

ಈ ಹೊಟೇಲ್ ಕಳೆದ ಹಲವು ದಿನಗಳಿಂದ ಬಾಗಿಲು ಹಾಕಿತ್ತು. ಹೆಚ್ಚಿನ ನೌಕರರು ತಮ್ಮ ಊರುಗಳಿಗೆ ತೆರಳಿದ್ದರು. ಅದರ ನೌಕರರಿಗೆ ಕೊರೋನ ಪರೀಕ್ಷೆ ನಡೆಸಿದಾಗ ಇಬ್ಬರಲ್ಲಿ ಮಾತ್ರ ಪಾಸಿಟಿವ್ ಕಂಡುಬಂದಿತ್ತು ಎಂದವರು ತಿಳಿಸಿದರು. ಅವರಲ್ಲಿ ಒಬ್ಬಾತ ಹೊಟೇಲ್‌ನಲ್ಲೇ ವಾಸವಾಗಿದ್ದರೆ, ಮತ್ತೊಬ್ಬ ಹಂದಟ್ಟುವಿನ ಮನೆಯಲ್ಲಿದ್ದ, ಇದೀಗ ಎರಡನ್ನೂ ಸೀಲ್‌ಡೌನ್ ಮಾಡಲಾಗಿದೆ.

ಇದರೊಂದಿಗೆ ಮೂಡಾರಿನ ಖಾಸಗಿ ಬ್ಯಾಂಕೊಂದರ ಸಿಬ್ಬಂದಿಯಲ್ಲೂ ಪಾಸಿಟಿವ್ ಕಂಡುಬಂದಿದೆ. ಈ ದಂಪತಿಗೆ ಕೆಲವು ದಿನಗಳಿಂದ ಜ್ವರ ಬಂದಿದ್ದು, ಸದ್ಯ ಇವರಲ್ಲಿ ಸೋಂಕು ಪತ್ತೆಯಾಗಿದೆ. ಪತ್ನಿ ಗರ್ಭಿಣಿಯಾಗಿದ್ದು, ಅವರ ವರದಿ ಇನ್ನಷ್ಟೇ ಬರಬೇಕಿದೆ.

ಬ್ರಹ್ಮಾವರದ ಹಂದಾಡಿ ಮತ್ತು ಹಾರಾಡಿಗಳಲ್ಲೂ ತಲಾ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಹಂದಾಡಿಯ ಒಂದು ಹಾಗೂ ಹಾರಾಡಿ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ. ಹಂದಾಡಿಯಲ್ಲಿ ಮಹಿಳೆಗೆ ಹಾಗೂ ಹಾರಾಡಿಯಲ್ಲಿ ಯುವಕನಿಗೆ ಸೋಂಕು ತಗಲಿದೆ. ಯುವಕ ಓಡಾಡಿಕೊಂಡಿದ್ದ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಮನೆಯಲ್ಲಿರುವ 14 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಬೈಂದೂರು ತಾಲೂಕಿನ ಹಳ್ಳಿಹೊಳೆ ಹಾಗೂ ಶಿರೂರಿನ ತಲಾ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಮಹಾರಾಷ್ಟ್ರದಿಂದ ಬಂದ ಇವರ ಮನೆಗಳನ್ನು ಸೀಲ್‌ಡೌನ್ ಮಾಡಿ, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ಗಂಗೊಳ್ಳಿಯ ಒಬ್ಬರಲ್ಲಿ, ಕೆದೂರಿನ ಇಬ್ಬರಲ್ಲಿ ಹಾಗೂ ಎಡಮೊಗೆಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಗಂಗೊಳ್ಳಿಯವರು ಮಂಗಳೂರಿನಿಂದ ಬಂದು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಕೆದೂರಿನ ಇಬ್ಬರಿಗೆ ಈಗಾಗಲೇ ಪಾಸಿಟಿವ್ ಬಂದಿರುವ ಕುಟುಂಬದ 13ರ ಹರೆಯದ ಬಾಲಕಿಯ ಸಂಪರ್ಕದಿಂದ ಸೋಂಕು ಬಂದಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News