ಬಂಟಕಲ್ಲು ವಿದ್ಯಾರ್ಥಿಗಳಿಂದ ಕಾಲಿನಿಂದ ಕಾರ್ಯನಿರ್ವಹಿಸುವ ವಾಶ್‌ಬೇಸಿನ್ ಅಭಿವೃದ್ದಿ

Update: 2020-07-11 09:13 GMT

ಉಡುಪಿ, ಜು.11: ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನ ಸೋಂಕು ನಿಯಂತ್ರಣಕ್ಕಾಗಿ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕೈಯಿಂದ ಸ್ಪರ್ಶಿಸದೆ ಕೇವಲ ಕಾಲಿನಿಂದಲೇ ಕಾರ್ಯನಿರ್ವಹಿಸುವ ಕೈತೊಳೆಯುವ ವಾಶ್‌ಬೇಸಿನ್ ಅಭಿವೃದ್ಧಿಪಡಿಸಿದ್ದಾರೆ.

ಈ ಮಾದರಿಯ ವಾಶ್ ಬೇಸಿನ್‌ನ ಕೆಳಭಾಗದಲ್ಲಿ ಒಂದು ರ್ಯಾಮ್ ಅಳವಡಿಸಿದ್ದು ಕಾಲಿನಿಂದ ಇದನ್ನು ಒತ್ತುವುದರಿಂದ ನಳ್ಳಿಯಲ್ಲಿ ನೀರು ಬರುತ್ತದೆ. ಈ ಮಾದರಿಯನ್ನು ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಆಸ್ಪತ್ರೆ, ಬಸ್ಸು ಮತ್ತು ರೈಲ್ವೆ ನಿಲ್ದಾಣ ಮತ್ತು ಶಾಲಾ-ಕಾಲೇಜುಗಳಲ್ಲಿ ಉಪಯೋಗಿಸುವುದರಿಂದ ಕೊರೋನ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಬಹು ದಾಗಿದೆ ಎಂಬುದು ಸಂಶೋಧನ ವಿದ್ಯಾರ್ಥಿಗಳ ಅಭಿಪ್ರಾಯ.

ಈ ಮಾದರಿಯನ್ನು ಕೈಗೆಟಕುವ ವೆಚ್ಚದಲ್ಲಿ ತಯಾರಿಸಿದ್ದು ಸಂಪೂರ್ಣ ಮೆಕ್ಯಾನಿಕಲ್ ಬಿಡಿಭಾಗಗಳನ್ನು ಬಳಸಲಾಗಿದೆ. ಇದರಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸೆನ್ಸಾರ್ ಬಿಡಿಭಾಗಗಳನ್ನು ಉಪಯೋಗಿಸಿಲ್ಲ. ಆದುದರಿಂದ ಇದಕ್ಕೆ ಯಾವುದೇ ಕಾರಣಕ್ಕೂ ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ ಹಾಗೂ ಅತಿ ಹೆಚ್ಚು ಬಾಳಿಕೆ ಬರುವುದಲ್ಲದೆ ನೀರು ಪೋಲಾಗುವುದನ್ನು ಇದರಿಂದ ತಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಮಹಾವಿದ್ಯಾಲಯದ ಅಂತಿಮ ವರ್ಷದ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಾದ ರಕ್ಷಿತ್ ಎನ್., ಸಾತ್ವಿಕ್ ಬಿ.ಆಚಾರ್ಯ, ವಿಘ್ನೇಶ್ ನಾಯಕ್ ಮತ್ತು ಶ್ರೇಯಸ್ಸ್ ಪೂಜಾರಿ, ಪ್ರಾಧ್ಯಾಪಕ ಕಿರಣ್ ಎನ್ ಭಟ್ ಮಾರ್ಗದರ್ಶನದಲ್ಲಿ ಈ ವಿಶೇಷ ಕೈತೊಳೆಯುವ ವಾಶ್ ಬೇಸಿನ್‌ಅನ್ನು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಮತ್ತು ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News