ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂಧೆ ವಿರುದ್ಧ ಹೋರಾಟ: ಎಸ್‌ಡಿಪಿಐ

Update: 2020-07-11 09:22 GMT

ಮಂಗಳೂರು, ಜು.11: ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲೂ ಈ ಸೋಂಕು ವ್ಯಾಪಕವಾಗಿ ಸಾಮುದಾಯಿಕವಾಗಿ ಹರಡುತ್ತಿದೆ. ಕೊರೋನ ಪೀಡಿತರಾಗಿ ಮರಣ ಹೊಂದುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಸಾವಿರಾರು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರಿ ಆಸ್ಪತ್ರೆಯ ವೈಫಲ್ಯ ಮರೆಮಾಚಲು ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸೆಗೆ ಅನುಮತಿ ನೀಡಿದೆ. ಆ ಬಳಿಕ ಖಾಸಗಿ ಆಸ್ಪತ್ರೆಗಳು ಹಣ ದೋಚುವ ದಂಧೆ ಶುರು ಮಾಡಿದ್ದು ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಈ ದಂಧೆಯ ವಿರುದ್ಧ ಸರಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್ ಎಚ್ಚರಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಕೋವಿಡ್ ಪರೀಕ್ಷೆಗಾಗಿ 4,500 ರೂ.ನೊಂದಿಗೆ ವೈದ್ಯರುಗಳ ಪಿಪಿಇ ಕಿಟ್ ಎಂದು 8,000ಕ್ಕೂ ಅಧಿಕ ಹಣವನ್ನು ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿವೆ. ರೋಗಿಗಳಿಗೆ ಪ್ರತೀ ದಿನಕ್ಕೆ 15ರಿಂದ 20 ಸಾವಿರ ರೂ. ದುಬಾರಿ ಬಿಲ್ ಹಾಕಿ ಕೊರೋನ ವ್ಯಾಪಾರ ಆರಂಭಿಸಿದೆ ಎಂದರು.

ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು, ಆಕ್ರೋಶಗಳು ವ್ಯಕ್ತವಾಗುತ್ತಿವೆ. ಖಾಸಗಿ ಆಸ್ಪತ್ರೆಗಳ ದಂಧೆಗಳ ಬಗ್ಗೆ ಮತ್ತು ಲ್ಯಾಬ್ ಟೆಸ್ಟ್‌ನ ಕುರಿತು ಅನುಮಾನಗಳ ಅನುಭವವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಕಾಲುನೋವು, ಹೆರಿಗೆ ಅಥವಾ ಯಾವುದೇ ಸಣ್ಣಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಒತ್ತಾಯಪೂರ್ವಕವಾಗಿ ಕೊರೋನ ಟೆಸ್ಟ್ ಮಾಡಿಸುತ್ತಿರುವುದಲ್ಲದೆ ಹೆಚ್ಚಿನ ಪ್ರಮಾಣದ ರೋಗಿಗಳ ವರದಿಗಳು ಪಾಸಿಟಿವ್ ಬರುತ್ತಿವೆ. ಅಲ್ಲದೆ ಬೆಳಗ್ಗೆ ನೆಗೆಟಿವ್ ಬಂದ ಪ್ರಕರಣಗಳು ಮಧ್ಯಾಹ್ನದ ವೇಳೆ ಪಾಸಿಟಿವ್ ಆಗುತ್ತಿವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆಸ್ಪತ್ರೆಯಲ್ಲಿ ನೆಗೆಟಿವ್ ವರದಿ ನೀಡಿ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಿದ ಬಳಿಕ ಕರೆ ಮಾಡಿ ನಿಮ್ಮ ವರದಿ ಪಾಸಿಟಿವ್ ಆಗಿದೆ, ಆ್ಯಂಬುಲೆನ್ಸ್ ಕಳುಹಿಸುತ್ತೇವೆ ಹೊರಡಲು ತಯಾರಾಗಿ ಎಂಬಂತಹ ಪ್ರಕರಣಗಳು ಹಲವು ಕಡೆ ನಡೆದಿರುವ ಬಗ್ಗೆ ಸ್ವತಃ ಸಂತ್ರಸ್ತರೇ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರೋಗಿಗಳು ಆಸ್ಪತ್ರೆಗಳಿಗೆ ಹೋಗಲು ಭಯಪಟ್ಟು ಮನೆಯಲ್ಲೇ ಉಳಿದು ಜೀವ ಹೋದರೂ ಪರವಾಗಿಲ್ಲ ಅನ್ನುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.

ಖಾಸಗಿ ಆಸ್ಪತ್ರೆಗಳು ಕೊರೋನ ವೈರಸ್ ಹೆಸರಿನಲ್ಲಿ ನಡೆಸುತ್ತಿರುವ ದಂಧೆಯೇ ಇದಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದೆ ಕೊರೋನಪೀಡಿತರಾಗಿ ಮೃತಪಟ್ಟ ರೋಗಿಗೆ ಕೇವಲ ಎಂಟು ದಿನಗಳಿಗೆ 2 ಲಕ್ಷ ರೂ. ಬಿಲ್ ಮಾಡಿದ್ದೇ ಇದಕ್ಕೆ ಉದಾಹರಣೆಯಾಗಿದೆ. ಇಂತಹ ಅನೇಕ ಪ್ರಕರಣಗಳು ದ.ಕ. ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದರೂ ಸರಕಾರ ವೌನ ವಹಿಸಿರುವುದು ಖಂಡನೀಯ. ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದಲೂ ಜನರು ರೋಸಿ ಹೋಗಿದ್ದಾರೆ. ಅತ್ಯಂತ ಕಳಪೆ ಆಹಾರ ಪೂರೈಕೆ, ತಡವಾಗಿ ಆಹಾರ ನೀಡುವುದು, ಬಿಸಿ ನೀರಿನ ಪೂರೈಕೆ ಇಲ್ಲದಿರುವುದು, ನೈರ್ಮಲ್ಯದ ಕೊರತೆ ಇತ್ಯಾದಿಗಳು ಸರಕಾರಿ ಆಸ್ಪತ್ರೆಗಳಲ್ಲಿ ತಾಂಡವವಾಡುತ್ತಿದೆ ಎಂದು ಮಜೀದ್ ಖಾನ್ ಆರೋಪಿಸಿದರು.

ಖಾಸಗಿ ಆಸ್ಪತ್ರೆಗಳ ಈ ದಂಧೆಯ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಹಾಗೂ ಇಂತಹ ದಂಧೆ ನಡೆಸುವ ಆಸ್ಪತ್ರೆಗಳ ವಿರುದ್ಧ ಜನಸಾಮಾನ್ಯರಿಗೆ ದೂರು ದಾಖಲಿಸಲು ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಜಿಲ್ಲಾಡಳಿತ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗದಿದ್ದರೆ ಹೋರಾಟ ಮಾಡಲಾಗುವುದು ಎಂದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News