ನೇತ್ರಾವತಿ ಸೇತುವೆಯಲ್ಲಿ ಅಪಘಾತ: ಉಳ್ಳಾಲದ ಯುವಕ ಮೃತ್ಯು

Update: 2020-07-11 10:08 GMT

ಮಂಗಳೂರು, ಜು.11: ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಲಾರಿನಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಉಳ್ಳಾಲ ಬಂಡಿಕೊಟ್ಯ ನಿವಾಸಿ ಉಬೈದ್(28) ಎಂದು ಗುರುತಿಸಲಾಗಿದೆ. ಅವರೊಂದಿಗಿದ್ದ ಸಹಸವಾರ ಶಾಕಿರ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಬೈದುಲ್ಲಾ ಅವರು ಶಾಕಿರ್ ಎಂಬಾತನ ಜೊತೆಗೂಡಿ ದ್ವಿಚಕ್ರ ವಾಹನದಲ್ಲಿ ಮಂಗಳೂರಿನಿಂದ ಉಳ್ಳಾಲಕ್ಕೆ ತೆರಳುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಉಬೈದ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಹಿಂದಿನಿಂದ ಚಲಿಸುತ್ತಿದ್ದ ಮಿನಿ ಲಾರಿಯೊಂದು ಅವರ ಮೇಲೆ ಹರಿದಿದೆ. ಇದರಿಂದ ಉಬೈದ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಹಿಟ್ ಆ್ಯಂಡ್ ರನ್ ಮಾಡಿದ ಕಾರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
ಉಬೈದುಲ್ಲಾ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ನೇತ್ರಾವತಿಯಲ್ಲಿ ಸೇತುವೆಯಲ್ಲಿ ಕಾರೊಂದು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಸಿಮೆಂಟ್ ಸಾಗಾಟದ ಲಾರಿಯಡಿಗೆ ಸಿಲುಕಿದೆ ಎನ್ನಲಾಗಿದೆ. ಇದರಿಂದ ಉಬೈದುಲ್ಲಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಹಸವಾರನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಲೆತ್ನಿಸಿದ್ದಾನೆ. ಬಳಿಕ ಕಾರನ್ನು ಬೆನ್ನಟ್ಟಿದ ಸಾರ್ವಜನಿಕರು ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಕಾರನ್ನು ಅಡ್ಡಗಟ್ಟಿ, ಅದರಲ್ಲಿದ್ದ ಸೋಮೇಶ್ವರ ಪುರಸಭೆಯ ಸಿಬ್ಬಂದಿ ಸಹಿತ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಪಘಾತದ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News