ಮಂಗಳೂರು ವಿವಿಯಲ್ಲಿ ‘ಹೊಸ್ತೋಟ ಸ್ಮೃತಿ’ ಸಂಜೆ ಕಾರ್ಯಕ್ರಮ

Update: 2020-07-11 10:15 GMT

ಕೊಣಾಜೆ, ಜು.11: ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ  ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿ ಹೇಳಿದ್ದಾರೆ.

ಅವರು ಮಂಗಳೂರು‌ ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ಶುಕ್ರವಾರ ಜಾಲತಾಣದಲ್ಲಿ‌ ನೇರಪ್ರಸಾರದ ಮೂಲಕ ನಡೆದ ಹೊಸ್ತೋಟ ಸ್ಮೃತಿ ಸಂಜೆ ಹಾಗೂ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹೊಸ್ತೋಟ ಸ್ಮೃತಿ ಸ್ಮರಣೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಯಕ್ಷಗಾನ ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಯಕ್ಷಗಾನ ಅಧ್ಯಯನ ಕೇಂದ್ರ ಮಾಡುತ್ತಾ ಇದೆ. ಕೇಂದ್ರವು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿದ್ದು, ವಿವಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು.

ಯಕ್ಷಗಾನ ಪೋಷಕರಾದ‌‌ ನಾರಾಯಣ ಭಟ್ ಕೊಡಕ್ಕಲ್ಲು  ಅತಿಥಿಯಾಗಿ ಭಾಗವಹಿಸಿದ್ದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಸವಿನಯ ನೆಲ್ಲಿತೀರ್ಥ, ಯಜ್ಞೇಶ್ ರೈ ಕಟೀಲು ಭಾಗವಹಿಸಿದ್ದರು.

ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ್ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಶ್ರೀಪತಿ ಕಲ್ಲೂರಾಯ, ಮೇಘಶ್ರೀ ಕಜೆ ಭಾಗವಹಿಸಿದ್ದರು. ಅಬ್ಬಕ್ಕ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
 


ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಹತ್ತು ವರ್ಷಗಳಿಂದ ಹತ್ತು ಹಲವಾರು ಯಕ್ಷಗಾನ ಚಟುವಟಿಕೆಗಳನ್ನು ನಡೆಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮುಂದೆ ನಡೆಯಲಿರುವ ದಶಮ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಾ.ದಯಾನಂದ ಪೈಯವರಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುವುದು.
-ಪ್ರೊ.ಪಿ.ಎಸ್.ಯಡಪಡಿತ್ತಾಯ
ಮಂಗಳೂರು ವಿವಿ ಕುಲಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News