ಕುಂದಾಪುರ ನಗರದಲ್ಲಿ ಅಪರಾಹ್ನ 2ರವರೆಗೆ ಮಾತ್ರ ವ್ಯವಹಾರ

Update: 2020-07-11 13:20 GMT

ಕುಂದಾಪುರ, ಜು.11: ಕೊರೋನ -19 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ವರ್ತಕರು ಹಾಗೂ ಸಾರ್ವಜನಿಕರ ಹಿತರಕ್ಷಣೆ ಹಿನ್ನೆಲೆಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಮೆಡಿಕಲ್, ಹಾಲು, ಹೋಟೆಲ್ ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳು ಜು.13ರಿಂದ ಜು.31ವರೆಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದು, ಬಳಿಕ ಸ್ವಯಂ ಪ್ರೇರಿತ ಬಂದ್ ಮಾಡಲು ಕುಂದಾಪುರದ ಸಮಾನ ಮನಸ್ಕ ವರ್ತಕರು ನಿರ್ಧರಿಸಿದ್ದಾರೆ.

ಕುಂದಾಪುರದ ಹೋಟೆಲ್ ಒಂದರಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ವರ್ತಕ ರಾಧಾಕೃಷ್ಣ ಈ ವಿಚಾರವನ್ನು ಪ್ರಕಟಿಸಿದರು. ಕೊರೋನ ಸಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150ಕ್ಕಿಂತ ಅಧಿಕ ಸಮಾನ ಮನಸ್ಕ ವ್ಯಾಪಾರಸ್ಥರು ಸಭೆ ಸೇರಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಮನವಿಯಂತೆ ಎಲ್ಲ ವರ್ತಕರು ಸ್ವಯಂಪ್ರೇರಿತ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಗ್ರಾಹಕರು ಕೂಡ ನಮಗೆ ಸಹಕಾರ ನೀಡಬೇಕು. ಅಗತ್ಯ ಸಾಮಾಗ್ರಿಗಳನ್ನು ಮಧ್ಯಾಹ್ನ 2 ಗಂಟೆಯ ಒಳಗಡೆ ಖರೀದಿಸಬೇಕು. ಇದರಿಂದ ಸಾಧ್ಯವಾದಷ್ಟು ಮಟ್ಟಿಗೆ ಕೋವಿಡ್ ಸಮುದಾಯಕ್ಕೆ ಹರಡುವುದನ್ನು ತಡೆಯಬಹುದಾಗಿದೆ. ಈ ಸ್ವಯಂಪ್ರೇರಿತ ಬಂದ ಕುರಿತು ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜುವೆಲ್ಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೇಟ್, ವರ್ತಕರಾದ ವಿಜಯಕುಮಾರ್ ಶೆಟ್ಟಿ, ಹುಸೇನ್ ಹೈಕಾಡಿ, ಅಬು ಮುಹಮ್ಮದ್, ತಬ್ರೈಜ್, ಸಂತೋಷ್, ಸತೀಶ್ ಹೆಗ್ಡೆ, ಜಸ್ವಂತ್ ಸಿಂಗ್, ಸುರೇಂದ್ರ ಶೇಟ್ ಮೊದಾದವರು ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಏನೆಲ್ಲ ಬಂದ್?
ಮೆಡಿಕಲ್, ಹಾಲು ಮಾರಾಟ, ಹೋಟೆಲುಗಳು ಈ ಬಂದ್ ವ್ಯಾಪ್ತಿಗೆ ಬರುವುದಿಲ್ಲ. ಕೆಲವು ಬೇಕರಿಗಳಲ್ಲಿ ಹಾಲು ಮಾರಾಟ ಮಾಡುವುದರಿಂದ ಹೊರಗೆ ಇಟ್ಟು ಹಾಲು ಮಾರಲು ಅವಕಾಶ ನೀಡಲಾಗಿದೆ. ಉಳಿದಂತೆ ದಿನಸಿ ಅಂಗಡಿ, ತರಕಾರಿ ಹಣ್ಣು, ಎಲೆಕ್ಟ್ರಾನಿಕ್ಸ್ ಮಳಿಗೆಗಳು, ಬೇಕರಿ, ಸೆಲೂನ್- ಬೂಟಿ ಪಾರ್ಲರ್‌ಗಳು, ಬಟ್ಟೆ, ಜ್ಯೂಸ್ ಪಾರ್ಲರ್, ಮೊಬೈಲ್ ಅಂಗಡಿ, ಚಿನ್ನಬೆಳ್ಳಿ ಆಭರಣ ಮಳಿಗೆಗಳು ಮಧ್ಯಾಹ್ನ 2ಗಂಟೆಯಿಂದ ಬಂದ್ ಇರುತ್ತವೆ.

ಉಡುಪಿಯಲ್ಲೂ ಕೆಲವು ಹೊಟೇಲ್‌ಗಳು ಬಂದ್!
ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಈಗಾಗಲೇ ಹಲವು ಹೊಟೇಲ್‌ಗಳ ಮಾಲಕರು ಹಾಗೂ ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಗರದ ಕೆಲವು ಹೊಟೇಲ್‌ಗಳ ಮಾಲಕರು ತಮ್ಮ ಹೊಟೇಲ್‌ಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ಕೋಟದಲ್ಲಿ ಎರಡು ಹಾಗೂ ಉಡುಪಿ ನಗರದ ಎರಡು ಹೊಟೇಲ್‌ಗಳ ಒಟ್ಟು ಎಂಟು ಮಂದಿಗೆ ಕೊರೋನ ಸೋಂಕು ಬಂದಿದ್ದು, ಈ ಹೊಟೇಲ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ಭಯಭೀತರಾಗಿರುವ ಗ್ರಾಹಕರು ಕೂಡ ಹೊಟೇಲ್‌ನತ್ತ ಬರುತ್ತಿಲ್ಲ. ಅದೇ ರೀತಿ ಹೊಟೇಲ್ ಮಾಲಕರಿಗೂ ಸೋಂಕು ಹರಡುವ ಭೀತಿ ಆವರಿಸಿದೆ.

ನಗರದ ಬ್ರಹ್ಮಗಿರಿಯಲ್ಲಿ ಸುಮಾರು ನಾಲ್ಕು ಹಾಗೂ ಸಿಟಿಸೆಂಟರ್‌ನಲ್ಲಿರುವ ಮತ್ತು ಮಣಿಪಾಲದಲ್ಲಿರುವ ಕೆಲವು ಹೊಟೇಲ್‌ಗಳನ್ನು ಮಾಲಕರು ಸ್ವಯಂ ಪ್ರೇರಿತರಾಗಿ ಕೆಲವು ದಿನಗಳ ಹಿಂದೆ ಬಂದ್ ಮಾಡಿದ್ದಾರೆ. ‘ನಮಗೆ ಮತ್ತು ಹೊಟೇಲ್ ಸಿಬ್ಬಂದಿಗೆ ಕೊರೋನ ಹರಡಿದರೆ ಮುಂದೆ ವ್ಯಾಪಾರವೇ ಇಲ್ಲವಾಗಬಹುದು. ಅದಕ್ಕೆ ನಾವೇ ಸ್ವಯಂ ಪ್ರೇರಿತರಾಗಿ ಕೆಲವು ದಿನಗಳ ಕಾಲ ಹೊಟೇಲ್ ಬಂದ್ ಮಾಡುತ್ತಿದ್ದೇವೆ’ ಎಂದು ಹೊಟೇಲ್ ಮಾಲಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News