ಪುತ್ತೂರು: ಅಕ್ಷರ ಯಾನ ಕೃತಿ ಲೋಕಾರ್ಪಣೆ

Update: 2020-07-11 11:15 GMT

ಪುತ್ತೂರು: ಶ್ರಮದ ಮೂಲಕ ಬದುಕು ಕಟ್ಟಿಕೊಂಡು ಬೆಳೆದು ಬಂದಿರುವ ರಘುನಾಥ ರಾವ್ ಅವರು ತನ್ನ ವೃತ್ತಿ ಬದ್ಧತೆಯಿಂದ ಮುದ್ರಣ ಕ್ಷೇತ್ರಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು.

ಅವರು ಶನಿವಾರ ದರ್ಬೆ ರಾಜೇಶ್ ಪವರ್ ಪ್ರೆಸ್‍ನಲ್ಲಿ ಜರಗಿದ ಸರಳ ಸಮಾರಂಭದಲ್ಲಿ ರಾಜೇಶ್ ಪವರ್ ಪ್ರೆಸ್ ಮಾಲಕ ಎಂ.ಎಸ್. ರಘುನಾಥ ರಾವ್ ಅವರ ವೃತ್ತಿ ಬದುಕಿನ ಅನುಭವ ಗಾಥೆ 'ಅಕ್ಷರ ಯಾನ' ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ಜೀವನ ಪಾಠಕ್ಕಿಂತ ಮಿಗಿಲಾದ ಪಾಠ ಬೇರೊಂದಿಲ್ಲ. ಓರ್ವನ ಅನುಭವ ಇನ್ನೊಬ್ಬರ ಕೈದೀವಿಗೆಯಾಗುತ್ತದೆ. ಶ್ರಮದ ಮೂಲಕ ಬದುಕು ಕಟ್ಟಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ರಘುನಾಥ ರಾಯರು ಅದನ್ನು ಮೀರಿ ಬೆಳೆದಿದ್ದಾರೆ. ಅಕ್ಷರ ಯಾನ ಕೃತಿಯು ಕಾಲದ ದಾಖಲಾತಿಯಲ್ಲಿ ಸೇರಿಕೊಳ್ಳಲಿದೆ ಎಂದರು. 

ಅಕ್ಷರ ಯಾನದ ಸಂಪಾದಕರಾದ ಪತ್ರಕರ್ತ ನಾ. ಕಾರಂತ ಪೆರಾಜೆ ಕೃತಿ ಪರಿಚಯ ಮಾಡಿದರು. ಹಿರಿಯ ಸಾಹಿತಿ ಗೋಪಾಲಕೃಷ್ಣ ಶಗ್ರಿತ್ತಾಯ ಅಭಿನಂದನಾ ಮಾತುಗಳನ್ನಾಡಿದರು. 

ಕಲಾವಿದ ಪ್ರಸನ್ನ ರೈ ಸವಣೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ, ವಿವೇಕಾನಂದ ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಕುಂಬಳೆ, ಶ್ಯಾಮಲಾ ರಘುನಾಥ ರಾವ್ ಮತ್ತಿತರರು ಉಪಸ್ಥಿತರಿದ್ದರು. ರಘುನಾಥ ರಾವ್ ಸ್ವಾಗತಿಸಿದರು. ನಾರಾಯಣ ನಿರ್ವಹಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News