ಕಾನೂನು 21ನೇ ಶತಮಾನದ ನಿರೀಕ್ಷೆಗನುಗುಣವಾಗಿ ಕಾರ್ಯನಿರ್ವಹಿಸಲಿ: ಪ್ರೊ.(ಡಾ.) ಪಿ. ಈಶ್ವರ ಭಟ್

Update: 2020-07-11 11:23 GMT

ಉಡುಪಿ, ಜು.11: ಅಂತರ್‌ರಾಷ್ಟ್ರೀಯ ಕಾನೂನು ಮಾನವ ಹಕ್ಕುಗಳ ರಕ್ಷಣೆಯ ಧ್ಯೇಯೋದ್ದೇಶವನ್ನು ಒಳಗೊಂಡಂತೆ 21ನೇ ಶತಮಾನದ ನಿರೀಕ್ಷೆ ಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.(ಡಾ.)ಪಿ.ಈಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ‘21ನೇ ಶತಮಾನದಲ್ಲಿ ಅಂತರ್‌ರಾಷ್ಟ್ರೀಯ ಕಾನೂನಿನಲ್ಲಿ ಆಗುತ್ತಿರುವ ಸ್ಥಿತ್ಯಂತ್ರಗಳು’ ಎಂಬ ವಿಷಯ ಕುರಿತು ಎರಡು ದಿನಗಳ ನಡೆದ ಅಂತರ್‌ರಾಷ್ಟೀಯ ಆನ್‌ಲೈನ್ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ನೀಡಿ ಅವರು ಮಾತನಾಡುತಿದ್ದರು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರ-ರಾಷ್ಟ್ರಗಳ ನಡುವೆ ಇರುವ ಗಡಿವಿವಾದಗಳನ್ನು ಮಧ್ಯಸ್ಥಗಾರಿಕೆ, ಪರಸ್ಪರ ಒಪ್ಪಂದಗಳು ಹಾಗೂ ಸಂಧಾನಗಳ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಪ್ರಾಥಮಿಕ ಜವಾಬ್ದಾರಿ ಎಲ್ಲಾ ರಾಷ್ಟ್ರಗಳ ಮೇಲಿವೆ. ವಿವಾದಗಳನ್ನು ಬಗೆಹರಿಸುವ ಸಂದರ್ಭದಲ್ಲಿ ಸ್ಥಳೀಯ ಜನರ ಸುರಕ್ಷತೆ, ಅವರ ಅಭಿವೃದ್ದಿ ಹಾಗೂ ಅವರ ಇಚ್ಚೆಯನ್ನು ಪರಿಗಣಿಸಿ ಮಾನವ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ಶಾಂತಿಯುತ ವಾಗಿ ಬಗೆಹರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಡಾ.ಈಶ್ವರ್ ಭಟ್ ಅವರು ಭಾರತ ತನ್ನ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ಥಾನ, ಬಾಂಗ್ಲಾದೇಶಗಳ ಜೊತೆ ಶಾಂತಿಯುತವಾಗಿ ಇತ್ಯರ್ಥ ಪಡಿಸಿಕೊಂಡ ಗಡಿವಿವಾದಗಳ ಬಗ್ಗೆ ಮಾಹಿತಿ ನೀಡಿದರು.

ವಿಚಾರಸಂಕಿರಣದಲ್ಲಿ ಮಾತನಾಡಿದ ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಪ್ರೊ.ಅಂತೊನಿ ಆಂಜಿ, ಪ್ರಥಮ ಹಾಗೂ ದ್ವಿತೀಯ ಮಹಾಯುದ್ದದ ಸಂದರ್ಭದಲ್ಲಿ ಉಂಟಾದ ಬಿಕ್ಕಟಿನ ಪರಿಣಾಮ ಜಗತ್ತಿನಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಸಂಯುಕ್ತ ರಾಷ್ಟ್ರಸಂಘ, ವಿಶ್ವಸಂಸ್ಥೆ ಹಾಗೂ ಇನ್ನಿತರ ಆಂತರ್‌ರಾಷ್ಟ್ರೀಯ ಸಂಸ್ಥೆಗಳು ಸ್ಥಾಪಿಸಲ್ಪಟ್ಟವು ಎಂದರು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಉಂಟಾಗುವ ಬಿಕ್ಕಟ್ಟುಗಳನ್ನು ಪರಿಹರಿಸಲು ಪರಿಣಾಮಕಾರಿ ಯಾದ ನೀತಿಗಳ ರಚನೆ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಬದ್ದತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕಾಯನಿರ್ವಹಿಸಬೇಕಾದ ಅವಶ್ಯಕತೆ ಇದೆ ಎಂದರು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾದ್ಯಾಪಕ ಪ್ರೊ.(ಡಾ.) ಎಚ್.ಕೆ.ನಾಗರಾಜ್ ‘ಉಗ್ರವಾದ ಹಾಗೂ ಹಿಂಸಾತ್ಮಕ ಭಯೋತ್ಪಾದನೆಯನ್ನು ನಿಗ್ರಹಿಸುವ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣೆ’ ಎಂಬ ವಿಷಯದ ಕುರಿತು ಹಾಗೂ ಕೋಲ್ಕತ್ತಾದ ಎನ್‌ಯುಜೆಎಸ್‌ನ ಪ್ರಾದ್ಯಾಪಕ ಪ್ರೊ.(ಡಾ) ಸಂದೀಪ್ ಭಟ್ ‘ಸಾರ್ವಜನಿಕ ಕ್ಷೇತ್ರದಿಂದ ಖಾಸಗಿ ಕ್ಷೇತ್ರದತ್ತ ಬಾಹ್ಯಾಕಾಶ ಕಾನೂನು 21ನೇ ಶತಮಾನದಲ್ಲಿ ವಾಲುತ್ತಿದೆಯೇ?’ ಎಂಬ ವಿಷಯದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.(ಡಾ.) ಪ್ರಕಾಶ್ ಕಣಿವೆ ವಿಚಾರ ಸಂಕಿರಣದ ಉದ್ದೇಶಗಳನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಬಿ.ಜಿ ಶಂಕರಮೂರ್ತಿ ವಂದಿಸಿದರು. ಉಪನ್ಯಾಸಕಿ ಆಯೇಷಾ ರಾವ್ ತಾಂತ್ರಿಕ ಸಹಕಾರ ನೀಡಿದರು. ಉಪನ್ಯಾಸಕಿ ಪ್ರೀತಿ ಹರೀಶ್‌ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News