ಮೀನುಗಾರಿಕೆಯಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ: ಸಚಿವ ಕೋಟ

Update: 2020-07-11 13:22 GMT

ಉಡುಪಿ, ಜು.11: ಮೀನುಗಾರಿಕೆಯಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ಅದನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ ಇದೆ ಎಂದು ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡ ರೇಶನ್ ಮತ್ತು ಹಂಗಾರಕಟ್ಟೆ- ಕೋಡಿಬೆಂಗ್ರೆ ಯಾಂತ್ರಿಕೃತ ಮೀನುಗಾರರ ಸಂಘದ ಆಶ್ರಯದಲ್ಲಿ ಜು.8ರಂದು ನಡೆದ ಬೋಟ್ ಮಾಲಕರಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಕೊರೋನ ಸಂಕಷ್ಟದಿಂದ ಪರವೂರಿನಲ್ಲಿರುವ ಸಾವಿರಾರು ಮಂದಿ ಮೀನುಗಾರರು ಉದ್ಯೋಗವಿಲ್ಲದೆ ಹುಟ್ಟೂರಿನ ಕಡೆಗೆ ಆಗಮಿಸುತ್ತಿದ್ದಾರೆ. ಇಂತವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪಂಜರ ಮೀನು ಸಾಕಾಣಿಕೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಇಲಾಖೆಯ ಮುಂದಿದೆ. ಶೀಘ್ರದಲ್ಲೇ ಇದಕ್ಕೆ ಚಾಲನೆ ನೀಡಲಾಗುವುದು. ಜನವರಿಯಿಂದ ಮಾರ್ಚ್‌ವರೆಗಿನ ಮೀನುಗಾರಿಕೆ ಡಿಸೇಲ್ ಸಬ್ಸಿಡಿಯನ್ನು ಸರಕಾರ ಬಿಡುಗಡೆಗೊಳಿಸಿದೆ ಎಂದರು.

ಕೋಡಿಬೆಂಗ್ರೆ ಮೀನುಗಾರಿಕೆ ಜೆಟ್ಟಿಯ ಅಳಿವೆಯಲ್ಲಿ ಬೋಟ್‌ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಹೂಳನ್ನು ತೆರವುಗೊಳಿಸಲು ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ವಹಿಸಿದ್ದರು.

ಈ ಸಂದರ್ಭದಲ್ಲಿ 45ಕ್ಕೂ ಅಧಿಕ ಬೋಟ್ ಮಾಲಿಕರಿಗೆ ಪಡಿತರ ಕಿಟ್ ವಿತರಿಸಲಾಯಿತು. ಯಾಂತ್ರಿಕೃತ ಮೀನುಗಾರರ ಸಂಘದ ಅಧ್ಯಕ್ಷ ಬಿ.ಬಿ. ಕಾಂಚನ್, ಮಲ್ಪೆ ಯಾಂತ್ರಿಕೃತ ಮೀನುಗಾರರ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಫೆಡರೇಷನ್ ನಿರ್ದೇಶಕರಾದ ಸುರೇಶ್ ಸಾಲ್ಯಾನ್, ಸುಧಾಕರ, ಐರೋಡಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಬೇಬಿ ಸಾಲ್ಯಾನ್ ಉಪಸ್ಥಿತರಿದ್ದರು. ಯತೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News