ಬೈಂದೂರಿನಲ್ಲಿ 12, ಕೋಟದಲ್ಲಿ 8 ಮಂದಿಗೆ ಕೊರೋನ ಪಾಸಿಟಿವ್

Update: 2020-07-11 14:49 GMT

ಉಡುಪಿ, ಜು.10: ಶನಿವಾರ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 12 ಮಂದಿಗೆ ಕೊರೋನ ಪಾಸಿಟಿವ್ ಬಂದಿರುವ ಬಗ್ಗೆ ಮಾಹಿತಿ ಇದ್ದು, ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ಸೇರಿ ಈ ಎಲ್ಲರ ಮನೆಗಳನ್ನು ಸೀಲ್‌ಡೌನ್ ಮಾಡಿವೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.

ಉಪ್ಪುಂದಲ್ಲಿ ಐವರು, ಬಿಜೂರಿನಲ್ಲಿ ಇಬ್ಬರು, ಕೆರ್ಗಾಲ್‌ನಲ್ಲಿ ಒಬ್ಬರು, ಬಡಾಕೆರೆಯಲ್ಲಿ ಇಬ್ಬರು, ತೆಗ್ಗರ್ಸೆ ಮತ್ತು ಬೈಂದೂರುಗಳಲ್ಲಿ ತಲಾ ಒಬ್ಬರು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರು ಈಗಾಗಲೇ ಮಹಾರಾಷ್ಟ್ರ ಮುಂತಾದ ಕಡೆಗಳಿಂದ ಬಂದು ಪಾಸಿಟಿವ್ ಆದವರ ಸಂಬಂಧಿಕರಾಗಿದ್ದು, ಅವರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದವರು ತಿಳಿಸಿದರು.

ಕೋಟದಲ್ಲಿ ಎಂಟು ಮಂದಿ: ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ಯಲ್ಲಿ ಇಂದು ಎಂಟು ಮಂದಿಗೆ ಪಾಸಿಟಿವ್ ಬಂದಿರುವ ಬಗ್ಗೆ ವರದಿಗಳಿವೆ. ಇವುಗಳಲ್ಲಿ ಐವರು ಕೋಟ ಪಂಚಾಯತ್ ವ್ಯಾಪ್ತಿಯವರಾಗಿದ್ದಾರೆ. ಕೋಟ ಪೇಟೆಯಲ್ಲಿ ಈಗಾಗಲೇ ಮುಚ್ಚಿರುವ ಜಿನಸು ಅಂಗಡಿಯ ಇಬ್ಬರು ಕೆಲಸಗಾರರಿಗೆ ಇಂದು ಪಾಸಿಟಿವ್ ಬಂದಿವೆ. ಅಂಗಡಿಯ ಮಾಲಕರ ಮನೆಯ ಒಟ್ಟು ಆರು ಮಂದಿಗೆ ಈಗಾಗಲೇ ಪಾಸಿಟಿವ್ ಬಂದಿದ್ದು, ಇದರಿಂದ ಸೋಂಕಿತರಾದವರ ಸಂಖ್ಯೆ ಎಂಟಕ್ಕೇರಿದೆ.

ನಿನ್ನೆ ಸೀಲ್‌ಡೌನ್ ಆಗಿರುವ ಪಾರಂಪಳ್ಳಿ ಚಿತ್ರಪಾಡಿಯ ಹೊಟೇಲ್‌ನ ಇನ್ನೊಬ್ಬ ನೌಕರನಿಗೆ ಇಂದು ಪಾಸಿಟಿವ್ ಬಂದಿದೆ. ಹೊಟೇಲ್‌ನ್ನು ನಿನ್ನೆಯೇ ಸೀಲ್‌ಡೌನ್ ಮಾಡಿ ಪಾಸಿಟಿವ್ ಬಂದ ಇಬ್ಬರು ನೌಕರರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಪಾಸಿಟಿವ್ ಬಂದಿರುವ ನೌಕರನ ಕೋಟದ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಅಲ್ಲದೇ ಬಾರಕೂರಿನಲ್ಲಿ ಅಂಗಡಿಯೊಂದರ ನೌಕರನಲ್ಲೂ ಸೋಂಕು ಕಾಣಿಸಿ ಕೊಂಡಿದ್ದು, ಆತನ ಯಡ್ತಾಡಿಯ ಮನೆಯನ್ನು ಇಂದು ಸೀಲ್‌ಡೌನ್ ಮಾಡಲಾಗಿದೆ. ಉಳಿದಂತೆ ಕೋಟದ ಮೊಬೈಲ್ ಅಂಗಡಿಯ ಕೆಲಸಗಾರರಿಗೆ, ಸಾರಿಗೆ ನೌಕರರಿಗೂ ಪಾಸಿಟಿವ್ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಪು ಠಾಣೆಯಲ್ಲಿ ಎಎಸ್‌ಐ ಆಗಿರುವ ಪೊಲೀಸ್ ಸಿಬ್ಬಂದಿಯ ಕೋಟದ ಮನೆಯನ್ನು ಸಹ ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ಬ್ರಹ್ಮಾವರದ ಬಿರ್ತಿಯಲ್ಲಿ 36ರ ಹರೆಯ ಯುವಕನೊಬ್ಬನಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ಕುಂದಾಪುರದ ಕರ್ಕುಂಜೆ, ತೆಕ್ಕಟ್ಟೆ, ಬಳ್ಕೂರು ಹಾಗೂ ಕೋಟೇಶ್ವರದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ತೆಕ್ಕಟ್ಟೆಯಲ್ಲಿ ಸೋಂಕು ಪತ್ತೆಯಾದವರು ಕೋಟದ ಜಿನಸಿನ ಅಂಗಡಿಯ ನೌಕರರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News