ಕಾಪು ಪೊಲೀಸ್ ಠಾಣೆ ಸೀಲ್‌ಡೌನ್: ಕಾಪು ತಾಲೂಕಿನ 30 ಮಂದಿಗೆ ಕೊರೋನ ಪಾಸಿಟಿವ್

Update: 2020-07-11 14:56 GMT

ಕಾಪು, ಜು.11: ಕಾಪು ತಾಲೂಕಿನಲ್ಲಿ ಒಟ್ಟು 30 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢವಾಗಿದೆ. ಈ ಮಧ್ಯೆ ಕಾಪು ಠಾಣೆಯ ಎಎಸ್‌ಐ ಅವರಲ್ಲಿ ಕೊರೋನ ಸೋಂಕು ದೃಢವಾದ ಹಿನ್ನೆಯಲ್ಲಿ ಠಾಣೆ ಸೀಲ್‌ಡೌನ್ ಮಾಡಲಾಗಿದೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತಿದ್ದ ಕಾಪು ಠಾಣೆಯ ಎಎಸ್‌ಐ ಕೋಟದಲ್ಲಿರುವ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತಿದ್ದರು. ತಪಾಸಣೆಯ ವೇಳೆ ಪಾಸಿಟಿವ್ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಪು ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಈಗ ಸಮೀಪದ ವೀರಭದ್ರ ಸಭಾಭವನದಲ್ಲಿ ಠಾಣೆ ಕಾರ್ಯಾಚರಿಸುತ್ತಿದೆ.

ಪಡುಬಿದ್ರಿಯಲ್ಲಿ 9 ಮಂದಿಗೆ ಪಾಸಿಟಿವ್: ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶನಿವಾರ ಒಂದೇ ದಿನ 9 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಹೆಜಮಾಡಿ, ಪಡುಬಿದ್ರಿ, ತೆಂಕ ಒಟ್ಟು 9, ಕಳತ್ತೂರು -3, ಕುತ್ಯಾರು ಒಂದೇ ಮನೆಯ 12 ಸೇರಿ, ಶಿರ್ವ 5, ಕುರ್ಕಾಲು-1 ಸೇರಿ ಒಟ್ಟು 35 ಮಂದಿಗೆ ಕೋವಿಡ್-19 ಪಾಸಿಟಿವ್ ಆಗಿದೆ.

6 ಮಂದಿ ಮುಂಬೈಯಿಂದ ಬಂದು ಕ್ವಾರಂಟೈನ್ ನಲ್ಲಿದ್ದವರು, ಇಬ್ಬರು ಬೆಂಗಳೂರಿನಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರು ಹಾಗೂ ಒಬ್ಬರು ನಡ್ಸಾಲಿನ ಸೋಂಕಿತ ಸಹೋದರರ ಪ್ರಾಥಮಿಕ ಸಂಪರ್ಕ ಹೊಂದಿದವರು.

ಮುಂಬೈನಿಂದ ಬಂದು ಪಡುಬಿದ್ರಿ ಬೇಂಗ್ರೆಯ ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದ 46 ವರ್ಷದ ಪುರುಷ, 35, 47 ಮತ್ತು 18 ವರ್ಷಗಳ ಮಹಿಳೆಯರು, ಹಾಗೂ 11 ಮತ್ತು 6 ವರ್ಷದ ಮಕ್ಕಳ ಗಂಟಲು ಸ್ರಾವ ಪರೀಕ್ಷೆ ಪಾಸಿಟಿವ್ ಬಂದಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಬಂದು ಎರ್ಮಾಳು ಬಸದಿ ಬಳಿಯ ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದ 48 ವರ್ಷದ ಪುರುಷ ಮತ್ತು 42 ವರ್ಷದ ಅವರ ಪತ್ನಿಗೆ ಸೋಂಕು ದೃಢಪಟ್ಟಿದ್ದು, ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೊಂದಿಗೆ 10 ವರ್ಷದ ಮಗ ವಾಸವಿದ್ದು ಮನೆಯಲ್ಲಿ ಒಬ್ಬನನ್ನೇ ಬಿಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಆತನನ್ನೂ ತಾಯಿಯ ಜತೆಗೆ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಹೆಜಮಾಡಿ ಕೋಡಿಯ 36 ವರ್ಷದ ವ್ಯಕ್ತಿ ನಡ್ಸಾಲಿನ ಸೋಂಕಿತ ಸಹೋದರರ ಸಂಪರ್ಕದಲ್ಲಿದ್ದ ಕಾರಣ ಗಂಟಲು ಸ್ರಾವ ಪರೀಕ್ಷೆ ನಡೆಸಿದ ಸಂದರ್ಭ ಪಾಸಿಟಿವ್ ಬಂದಿದೆ. ಅವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಅವರು ವಾಸವಿದ್ದ ಹೆಜಮಾಡಿ ಮಸೀದಿ ಬಳಿಯ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಇದೇ ಸಂದರ್ಭ ಪಡುಬಿದ್ರಿ ಪ್ರಾಥಮಿಕ ಅರೊಗ್ಯ ಕೇಂದ್ರದ ವೈದ್ಯಾಧಿಕಾರಿ ಸಹಿತ ಎಲ್ಲಾ 21 ಮಂದಿಯ ಗಂಟಲು ಸ್ರಾವ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಜತೆಗೆ ಅಲ್ಲಿನ 8 ಆಶಾ ಕಾರ್ಯಕರ್ತೆಯರ ಗಂಟಲು ಸ್ರಾವ ಪರೀಕ್ಷಾ ವರದಿಯೂ ನೆಗೆಟಿವ್ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News