ಕೋವಿಡ್-19 ತ್ವರಿತ ಪರೀಕ್ಷೆಗೆ ಜಿಲ್ಲೆಯಲ್ಲೂ ಆ್ಯಂಟಿಜೆನ್ ಕಿಟ್ ಬಳಕೆ: ದ.ಕ. ಜಿಲ್ಲಾಧಿಕಾರಿ

Update: 2020-07-11 17:14 GMT

ಮಂಗಳೂರು,ಜು.11:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ತಪಾಸಣೆಗೆ ಆ್ಯಂಟಿಜೆನ್ ಕಿಟ್ ಬಳಕೆ ಮಾಡಲಾಗುವುದು. ಈಗಾಗಲೆ ಕಿಟ್‌ಗಳನ್ನು ತರಿಸಲಾಗಿದೆ. ಇದರಿಂದಾಗಿ ಕೋವಿಡ್-19 ಬಗ್ಗೆ ಶೀಘ್ರವಾಗಿ ಫಲಿತಾಂಶ ಪಡೆಯಲು ಸಾಧ್ಯ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯ ಸರಕಾರ ಜಿಲ್ಲೆಗೆ ಈಗಾಗಲೆ ಕಿಟ್‌ಗಳನ್ನು ಪೂರೈಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿದಿನ 100ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿದೆ. 30ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಈ ಎಲ್ಲಾ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ತಜ್ಞರ ತಂಡವನ್ನು ರಚಿಸಲಾಗಿದೆ. ಸುಮಾರು 26 ಪ್ರಕರಣಗಳಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಮೃತಪಟ್ಟಿದ್ದು, ಕೋವಿಡ್-19 ಸೋಂಕು ಅವರ ದೇಹದಲ್ಲಿ ಪತ್ತೆಯಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಮತ್ತು ನ್ಯುಮೋನಿಯಾ ಸೇರಿಕೊಂಡಿದೆ. ಕೋವಿಡ್‌ನಿಂದ ಮೃತರಾದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಸೂಕ್ತ ಕ್ರಮಗಳೊಂದಿಗೆ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೋವಿಡ್ ತಪಾಸಣೆಯ ಸೌಲಭ್ಯವಿದೆ ಎಂದು ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ರೋಗ ಪರೀಕ್ಷೆಯ ಬಗ್ಗೆ ಭಯ ಬೇಡ: ಕೋವಿಡ್ ಪರೀಕ್ಷೆಯ ಬಗ್ಗೆ ಜನರು ಭಯ ಪಡುತ್ತಿರುವುದರಿಂದ ರೋಗ ಉಲ್ಭಣಿಸುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ರೋಗ ಉಲ್ಭಣಗೊಂಡ ಬಳಿಕ ಪರೀಕ್ಷೆಗೆ ತೆರಳುತ್ತಿರುವುದು ಕಂಡು ಬರುತ್ತಿದೆ. ಕೋವಿಡ್ -19 ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದರಿಂದ ಕೋರೋನ ಹತೋಟಿ ಸಾಧ್ಯ. ಜನರಲ್ಲಿ ರೋಗ ತಪಾಸಣೆಯ ಬಗ್ಗೆ ಹುಟ್ಟಿಕೊಂಡಿರುವ ಭಯದಿಂದ ತಪಾಸಣೆಗೆ ಬರುವುದು ವಿಳಂಬವಾಗುತ್ತಿದೆ. ಇದರಿಂದ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಸಕಾಲದಲ್ಲಿ ಕೊರೋನ ಸೋಂಕಿಗೆ ಚಿಕತ್ಸೆ ಪಡೆಯಲು ವಿಲಂಬವಾಗಿರುವುದು ಸಾವಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ .ಈ ಹಿನ್ನೆಲೆಯಲ್ಲಿ ಕೋವಿಡ್-19 ಲಕ್ಷಣಗಳು ಕಂಡು ಬಂದ ತಕ್ಷಣ ತಪಾಸಣೆ ಮಾಡಲು ಜನರು ಮುಂದೆ ಬರಬೇಕು. ಇದರಿಂದ ಜಿಲ್ಲೆಯಲ್ಲಿ ರೋಗದ ನಿಯಂತ್ರಣ ಸಾಧ್ಯಎಂದು ಜಿಲ್ಲಾಧಿಕಾರಿ ಸಿಂಧು .ಬಿ.ರೂಪೇಶ್ ತಿಳಿಸಿದ್ದಾರೆ.

ಆ್ಯಂಟಿಜೆನ್ ಟೆಸ್ಟ್ ಕಿಟ್‌ಗಳ ಮೂಲಕ 30 ನಿಮಿಷದಲ್ಲಿ ವರದಿ: ಈ ಕಿಟ್ ಗಳನ್ನು ತುರ್ತು ಸಂದರ್ಭದಲ್ಲಿ ಬಳಸುವ ಉದ್ದೇಶ ಹೊಂದಿದ್ದು, ಇದರ ಬಳಕೆಯಿಂದ ಕೇವಲ 30 ನಿಮಿಷದಲ್ಲಿ ಕೊರೋನ ಸೋಂಕಿನ ಬಗ್ಗೆ ವರದಿ ಪಡೆಯಲು ಸಾಧ್ಯ. ಆದರೆ ನಿಖರತೆ ಮಾತ್ರ ಶೇ. 50 ಎಂದು ತಜ್ಞರ ಸಮಿತಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

413 ಕಂಟೈನ್ ಮೆಂಟ್ ವಲಯಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 413 ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಅತ್ಯಂತ ಅಧಿಕ ಕೋವಿಡ್-19 ಪ್ರಕರಣಗಳು ಉಳ್ಳಾಲದಲ್ಲಿ ಪತ್ತೆಯಾಗಿದೆ .ಈ ಹಿನ್ನಲೆಯಲ್ಲಿ 300 ಕೋವಿಡ್ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಉಳ್ಳಾಲದಲ್ಲಿ ಇದುವರೆಗೆ 174 ಕೋವಿಡ್ -19 ಪಾಸಿಟಿವ್ ಪ್ರಕಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈಗಾಗಲೆ 2287 ಬೆಡ್‌ಗಳು ಕೊರೋನ ಸೋಂಕಿತರಿಗೆ ಸಿದ್ದವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ವಿದೇಶದಿಂದ 35 ವಿಮಾನಗಳ ಮೂಲಕ 5,483 ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ ಸಾಕಷ್ಟು ಕೋವಿಡ್-19 ಪ್ರಕಣಗಳು ಕಂಡು ಬಂದಿವೆ. ಇದುವರೆಗೆ ಇದುವರೆಗೆ 7,20,125 ಮನೆ ಸಮೀಕ್ಷೆ ಮಾಡಲಾಗಿದೆ. 3531 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ತುರ್ತು ಸೇವೆಗೆ 28 ಸರಕಾರಿ 108 ಸಂಖ್ಯೆಯ ಆ್ಯಂಬುಲೆನ್ಸ್‌ಗಳಿವೆ. ಇದಲ್ಲದೆ ಖಾಸಗಿಯವರ ಸಹಾಯ ಪಡೆದು 20 ಆ್ಯಂಬುಲೆನ್ಸಗಳನ್ನು ಕೋವಿಡ್-19ನಿಂದ ಮೃತಪಟ್ಟವರ ಮೃತದೇಹ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಸದಾಶಿವ ಶ್ಯಾನ್ ಭೋಗ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ, ಹಾಗೂ ತಜ್ಞರ ಸಮಿತಿಯ ವೈದ್ಯರಾದ ಡಾ.ಹಂಸರಾಜ್ ಆಳ್ವ, ಡಾ.ಚಕ್ರಪಾಣಿ, ಡಾ.ಸಂದೀಪ್ ರೈ, ಡಾ.ಮುರಳೀಧರ ಎಡಿಯಾಳ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News