ಪುತ್ತೂರು: ಕೊರೋನಕ್ಕೆ 2ನೇ ಬಲಿ

Update: 2020-07-12 08:02 GMT

ಪುತ್ತೂರು, ಜು.12: ಕೊರೋನ ಸೋಂಕಿತ ತಾಲೂಕಿನ ಮಾಡ್ನೂರು ಗ್ರಾಮದ 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ರವಿವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯ ಮೃತಪಟ್ಟಿದ್ದಾರೆ. ಇದರೊಂದಿಗೆ ತಾಲೂಕಿನಲ್ಲಿ ಈ ಸೋಂಕಿಗೆ ಎರಡನೇ ಬಲಿಯಾಗಿದೆ.

ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಈ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿತ್ತು.
ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ರವಿವಾರ ನಾಲ್ಕು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಸರ್ವೆ ನಿವಾಸಿ 15 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ಈಗಾಗಲೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ನಗರಸಭೆ ವ್ಯಾಪ್ತಿಯ ಮರೀಲ್ ಎಂಬಲ್ಲಿನ ನಿವಾಸಿ 35 ವರ್ಷ ವಯಸ್ಸಿನ ಗೃಹಿಣಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಅವರು ಜ್ವರದಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ 27 ವರ್ಷದ ಯುವಕನೊಬ್ಬನಿಗೆ ಕೊರೋನ ಸೋಂಕು ತಗುಲಿದೆ. ಅವರು ಇತ್ತೀಚೆಗೆ ವಿದೇಶದಿಂದ ಆಗಮಿಸಿದ್ದು, ಈಗಾಗಲೇ ಕ್ವಾರಂಟೈನ್‌ನಲ್ಲಿ ಇದ್ದಾರೆ.

ಕಡಬ ತಾಲೂಕಿನ ಬಲ್ಯ ಹೊಸ್ಮಠ ನಿವಾಸಿ 22 ವರ್ಷದ ಯುವತಿಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್
ಪೊಲೀಸ್ ಕಾನ್‌ಸ್ಟೇಬಲ್‌ಗೆ ಕೊರೋನ ಸೋಂಕು ತಗುಲಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯ ಎಸ್ಸೈ ಹಾಗೂ ಸಿಬ್ಬಂದಿ, ಮಹಿಳಾ ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿ ಗೆ ಕ್ವಾರಂಟೈನ್ ಮಾಡಲಾಗಿದೆ.

ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಇದುವರೆಗೆ ಕೊರೋನದಿಂದ ಇಬ್ಬರು ಮೃತಪಟ್ಟಿದ್ದು, ಉಭಯ ತಾಲೂಕಿನಲ್ಲಿ ಒಟ್ಟು 43 ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News