ಕೋವಿಡ್ ಲಾಕ್‌ಡೌನ್ ಸಂದರ್ಭ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದಿಂದ ಯಶಸ್ವಿ ಕಾರ್ಯಾಚರಣೆ

Update: 2020-07-12 11:19 GMT

ಮಂಗಳೂರು, ಜು.12: ಕೋವಿಡ್-19 ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿಧಿಸಿದ್ದ ಲಾಕ್‌ಡೌನ್ ಸಂದರ್ಭ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ) ಸಂಸ್ಥೆಯು ರಾಜ್ಯದ ವಿವಿಧ ರಕ್ತನಿಧಿಗಳಿಗೆ ರಕ್ತದಾನಿಗಳನ್ನು ಪೂರೈಸುವ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಎರಡು ರಕ್ತದಾನ ಶಿಬಿರಗಳಗಳನ್ನು ಆಯೋಜಿಸಿದ್ದ ಬ್ಲಡ್ ಹೆಲ್ಪ್‌ಲೈನ್ 117 ಯೂನಿಟ್ ರಕ್ತವನ್ನು ಸಂಗ್ರಹಿಸಿ ರಕ್ತನಿಧಿಗಳಿಗೆ ನೀಡಿದೆ. ಅಲ್ಲದೇ, ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ವಿವಿಧ ರಕ್ತನಿಧಿಗಳಿಗೆ ನೇರವಾಗಿ 555 ರಕ್ತದಾನಿಗಳನ್ನು ಕರೆದೊಯ್ದು ರಕ್ತದಾನ ಮಾಡಿಸಿದೆ. ಕೊರೋನ ಭೀತಿಯ ನಡುವೆಯೂ ರಕ್ತದ ತುರ್ತು ಬೇಡಿಕೆಯ ಕರೆಗೆ ಸ್ಪಂದಿಸಿ ಸ್ವಯಂಪ್ರೇರಿತವಾಗಿ ಸಂಸ್ಥೆಯ ನಿರ್ವಾಹಕರ ಸಹಕಾರದೊಂದಿಗೆ ರಾಜ್ಯದ 43 ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ ಒಟ್ಟು 672 ರಕ್ತದಾನಿಗಳು ರಕ್ತದಾನ ಮಾಡಿ ಸಹಕರಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕೋವಿಡ್-19 ತುರ್ತು ಕಾರ್ಯಾಚರಣೆಯಲ್ಲಿ ರಕ್ತದಾನವಲ್ಲದೇ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಕಂಟ್ರೋಲ್ ರೂಮ್ ಮೂಲಕ ಕ್ವಾರಂಟೈನ್ ವ್ಯಕ್ತಿಗಳ ಮಾಹಿತಿ ಸಂಗ್ರಹ, ಆಹಾರ ಕಿಟ್‌ಗಳ ಪೂರೈಕೆ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಔಷಧಿಗಳನ್ನು ಅವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಾರ್ಯವನ್ನು ಕೂಡಾ ಸಂಸ್ಥೆ ಮಾಡಿದೆ. ಅಲ್ಲದೇ ಅಶಕ್ತ ಬಡರೋಗಿಗಳ ಆಸ್ಪತ್ರೆಯ ಬಿಲ್ ಪಾವತಿ, ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದೆ ಎಂದು ಪ್ರಕಟನೆ ತಿಳಿಸಿದೆ.

ನೆರೆ ರಾಜ್ಯವಾದ ಕೇರಳದಿಂದ ಬಂದ ಔಷಧಿಗಳ ಮನವಿಯನ್ನು ಸ್ವೀಕರಿಸಿ ರಾಜ್ಯದ ಗಡಿಯ ವರೆಗೆ ಔಷಧಿಗಳನ್ನು ತಲುಪಿಸಿದೆ. ರಮಝಾನ್ ತಿಂಗಳಿನಲ್ಲಿ ಉಪವಾಸ ವೃತ ತೊರೆದ ಬಳಿಕ ದ.ಕ. ಜಿಲ್ಲೆಯಲ್ಲಿ 181 ಮಂದಿ ರಕ್ತದಾನಿಗಳನ್ನು ರಕ್ತನಿಧಿಗಳಿಗೆ ಪೂರೈಸಿದೆ. ಈದುಲ್ ಫಿತ್ರ್ ದಿನ ಜಿಲ್ಲಾದ್ಯಂತ ಒಟ್ಟು 53 ರಕ್ತದಾನಿಗಳನ್ನು ರಕ್ತನಿಧಿಗಳಿಗೆ ಪೂರೈಕೆ ಮಾಡಿದೆ.

ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯು ಯುಎಇಯಲ್ಲೂ ಕಾರ್ಯಾಚರಿಸುತ್ತಿದೆ. ಕೋವಿಡ್ ಸಂದರ್ಭ ಅಂದರೆ ಮಾರ್ಚ್ 6ರಂದು ನ್ಯೂ ಮಾರ್ಕ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮಂಗಳೂರು ಮತ್ತು ಕೊಂಕಣ್ಸ್ ಬೆಲ್ಸ್‌ನ ಜಂಟಿ ಆಶ್ರಯದಲ್ಲಿ ದುಬೈಯ ಲತೀಫಾ ಬ್ಲಡ್ ಡೊನೇಶನ್ ಸೆಂಟರ್‌ನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದರಲ್ಲಿ 50 ಮಂದಿ ಭಾಗವಹಿಸಿ ರಕ್ತದಾನ ಮಾಡಿದ್ದರು.

2016ರ ಆಗಸ್ಟ್‌ನಲ್ಲಿ ನಾಸಿರ್ ಉಳಾಯಿಬೆಟ್ಟು ಮತ್ತು ನಿಸಾರ್ ಉಳ್ಳಾಲ ನೇತೃತ್ವದಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಸ್ಥಾಪಿಸಲ್ಪಟ್ಟ ಬ್ಲಡ್‌ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯು ಈವರೆಗೆ 143 ಸಂಘಸಂಸ್ಥೆಗಳ ಜಂಟಿ ಆಶ್ರಯದಲ್ಲಿ 19 ಆಸ್ಪತ್ರೆಯ ರಕ್ತನಿಧಿಗಳ ಸಹಯೋಗದೊಂದಿಗೆ 121 ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ಹತ್ತು ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಿ ರಕ್ತನಿಧಿಗಳಿಗೆ ನೀಡಿದೆ ಎಂದು ಸಂಸ್ಥೆಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ವ್ಯವಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News