ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಒಂದೇ ದಿನ ಐವರು ಬಲಿ

Update: 2020-07-12 14:59 GMT

ಮಂಗಳೂರು, ಜು.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ. ಒಂದೇ ದಿನ ಮತ್ತೆ ಐವರು ಕೊರೋನಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಮೃತಪಟ್ಟವರೆಲ್ಲರೂ 50 ವರ್ಷದಿಂದ 72 ವರ್ಷದೊಳಗಿನವರು. ಸೋಂಕಿತರು ಮಧುಮೇಹ, ಹೃದಯಸಂಬಂಧಿ ಸಮಸ್ಯೆ, ರಕ್ತದೊತ್ತಡ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮಂಗಳೂರಿನ ಉರ್ವಾಸ್ಟೋರ್ ನ 72 ವರ್ಷದ ವೃದ್ಧ, ಬಳ್ಳಾಲ್‌ಭಾಗ್ ನಿವಾಸಿ 58 ವರ್ಷದ ಮಹಿಳೆ, ಬಂದರು ನಿವಾಸಿ 68 ವರ್ಷದ ವೃದ್ಧೆ, ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 55 ವರ್ಷದ ಪುರುಷ, ಪುತ್ತೂರು ಮೂಲದ ನಿವಾಸಿ 50 ವರ್ಷದ ವ್ಯಕ್ತಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಐಸಿಯು, ವೆಂಟಿಲೇಟರ್‌ನಲ್ಲಿದ್ದ ನಾಲ್ವರು ಸಾವು: ಕೋವಿಡ್ ಜಿಲ್ಲಾಸ್ಪತ್ರೆ ಸಹಿತ ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

72 ವರ್ಷದ ವೃದ್ಧ ಹಾಗೂ 68, 58 ವರ್ಷದ ವೃದ್ಧೆಯರು ಐಸಿಯುನಲ್ಲಿ ದಾಖಲಾಗಿದ್ದರು. 50 ವರ್ಷದ ಪುರುಷನು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೋರ್ವ ವ್ಯಕ್ತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಮೃತಪಟ್ಟ ಐವರ ಪೈಕಿ ಮೂವರು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪುತ್ತೂರು ಮೂಲದ ಸೋಂಕಿತ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ  ಮನೆಯಲ್ಲೇ ಮೃತಪಟ್ಟಿದ್ದಾರೆ. ಪಿಲಿಚಾಮುಂಡಿಕಲ್ಲು ನಿವಾಸಿಯು ಮೃತಪಟ್ಟ ಬಳಿಕ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News