ಎರಡನೆ ರವಿವಾರದ ಲಾಕ್‌ಡೌನ್: ಉಡುಪಿ ಜಿಲ್ಲೆ ಸಂಪೂರ್ಣ ಬಂದ್

Update: 2020-07-12 13:25 GMT

ಉಡುಪಿ, ಜು.12: ಜಿಲ್ಲೆಯಾದ್ಯಂತ ಎರಡನೆ ರವಿವಾರದ ಲಾಕ್‌ಡೌನ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು ಎಲ್ಲ ಕಡೆಗಳಲ್ಲಿ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಖಾಸಗಿ ಹಾಗೂ ಸರಕಾರಿ ಬಸ್‌ಗಳು, ರಿಕ್ಷಾ, ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿಯಲಿಲ್ಲ. ಇದರಿಂದ ಉಡುಪಿ, ಕುಂದಾಪುರ, ಕಾರ್ಕಳದಂತಹ ನಗರ ಗಳಲ್ಲಿನ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ, ಕ್ಲಿನಿಕ್, ಕೆಲವೊಂದು ಮೆಡಿಕಲ್, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ ಹೊರತುಪಡಿಸಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಬೆಳ್ಳಗೆಯಿಂದ ಬಂದ್ ಮಾಡಲಾಗಿತ್ತು.

ಸರಕು ಸಾಗಾಟ ಹಾಗೂ ಅಗತ್ಯ ವಾಹನಗಳನ್ನು ಬಿಟ್ಟರೆ ಇತರ ಯಾವುದೇ ವಾಹನಗಳು ಜಿಲ್ಲೆಯ ಎಲ್ಲೂ ಸಂಚರಿಸುತ್ತಿರಲಿಲ್ಲ. ಈ ವಾರವೂ ಉಡುಪಿ ನಗರದ ಕಲ್ಸಂಕದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕಾರ್ಯ ವನ್ನು ಪೊಲೀಸರು ನಡೆಸಿದರು. ಅದೇ ರೀತಿ ಕುಂದಾಪುರ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕಾಪು, ಪಡುಬಿದ್ರಿ, ಶಿರ್ವ, ಹಿರಿಯಡ್ಕ ಕೂಡ ಲಾಕ್ ಡೌನ್‌ನಿಂದ ಸಂಪೂರ್ಣ ಬಂದ್ ಆಗಿತ್ತು.

ಮಧ್ಯಾಹ್ನದ ಊಟ ವಿತರಣೆ: ಲಾಕ್‌ಡೌನ್‌ನ ಪ್ರಯುಕ್ತ ಸಾಮಾಜಿ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ಇಂದು ಸುಮಾರು 80 ಮಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ.

ತೀರಾ ಅಸಹಾಯಕ ಹಾಗೂ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಊಟವನ್ನು ವಿತರಿಸಲಾಗಿದೆ. ಅದೇ ರೀತಿ ರೋಗಿಯ ಜೊತೆ ಇರುವವರಿಗೆ ಊಟ ಪಡೆಯಲು ಆಸ್ಪತ್ರೆಯ ಕ್ಯಾಂಟಿನ್ ಹಾಗೂ ಸುತ್ತಮುತ್ತಲಿನ ಯಾವುದೇ ಹೋಟೆಲ್ ತೆರೆದಿಲ್ಲದೆ ಇರುವುದರಿಂದ ರೋಗಿಯ ಜೊತೆ ಇರುವವರಿಗೆ ಆಹಾರವನ್ನು ಅವರು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News