ಬೆಂಗಳೂರಿನಿಂದ ಬಂದವರಿಂದ ಸ್ವಯಂಪ್ರೇರಿತ ಹೋಮ್ ಕ್ವಾರಂಟೇನ್‌ಗೆ ಮನವಿ: ಉಡುಪಿ ಎಡಿಸಿ ಸದಾಶಿವ ಪ್ರಭು

Update: 2020-07-12 13:32 GMT

ಕುಂದಾಪುರ, ಜು.12: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರಿಂದ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಇನ್ನೆರೆಡು ದಿನಗಳಲ್ಲಿ ಅಲ್ಲಿಂದ ಹೆಚ್ಚಿನ ಸಂಖ್ಯೆಯ ಜನ ಉಡುಪಿ ಜಿಲ್ಲೆಗೆ ಬರುವ ನಿರೀಕ್ಷೆ ಇದೆ. ಹಾಗೆ ಬೆಂಗಳೂರಿನಿಂದ ಬಂದವರು ತಮ್ಮ ತಮ್ಮ ಮನೆಗಳಲ್ಲಿ ಸ್ವಯಂ ಪ್ರೇರಿತರಾಗಿ ಕ್ವಾರಂಟೇನ್‌ಗೆ ಒಳಗಾಗಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮನವಿ ಮಾಡಿಕೊಂಡಿದ್ದಾರೆ.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸರಕಾರಿ ಕೋವಿಡ್ ಆಸ್ಪತ್ರೆಗೆ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಹೊರ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೇನ್ ವಿಧಿಸಲು ನಿಯಮಾವಳಿಗಳಲ್ಲಿ ಅವಕಾಶ ಇರುವುದಿಲ್ಲ. ಆದುದರಿಂದ ಅವರೇ ಸ್ವಯಂ ಪ್ರೇರಿತರಾಗಿ ಕ್ವಾರಂಟೇನ್ ಆಗಬೇಕು ಎಂದರು.

ಕೋವಿಡ್ ವಿಚಾರವಾಗಿ ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಈಗಾಗಲೇ ನಿರ್ದೇಶನ ನೀಡಿದ್ದೇವೆ. ಶೀತ, ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇರುವವರ ಬಗ್ಗೆ ಮತ್ತು ಬೆಂಗಳೂರು ಹಾಗೂ ಹೊರ ಜಿಲ್ಲೆಗಳಿಂದ ಬಂದವರ ಬಗ್ಗೆಯೂ ಮಾಹಿತಿ ಕ್ರೋಡೀಕರಣ ಮಾಡಿ ಕೊಡುವಂತೆ ಸೂಚಿಸಲಾಗಿದೆ. ಈ ಸಂಬಂಧ ನಾಳೆ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದರು.

ಇಂದು ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಸಂಖ್ಯೆ ಜಾಸ್ತಿಯಾಗುತ್ತಿವೆ. ಆದರೆ ಇದರಲ್ಲಿ ರೋಗದ ಲಕ್ಷಣಗಳಿರುವ ಪ್ರಕರಣಗಳು ತುಂಬಾ ಕಡಿಮೆ ಇದೆ. ಆ ನಿಟ್ಟಿನಲ್ಲಿ ಲಕ್ಷಣಗಳಿಲ್ಲದವರಿಗೆ ಚಿಕಿತ್ಸೆ ನೀಡಲು ಕೊಲ್ಲೂರು ಗೆಸ್ಟ್ ಹೌಸ್‌ನ್ನು ಮತ್ತೆ ಪುನಶ್ಚೇತನಗೊಳಿಸಲಾಗುವುದು. ಕುಂದಾಪುರ ಮತ್ತು ಉಡುಪಿಯಲ್ಲಿ ಹಾಸ್ಟೆಲ್‌ಗಳನ್ನು ಸಿದ್ಧಪಡಿಸಿ ಇಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗೇಶ್ ಉಪಸ್ಥಿತರಿದ್ದರು.

ಹೋಮ್ ಐಸೋಲೆಶನ್‌ಗೆ ಚಿಂತನೆ

ಈಗಾಗಲೇ ರಾಜ್ಯ ಸರಕಾರ ರೋಗ ಲಕ್ಷ್ಮಣಗಳಿದ್ದವರಿಗೆ ಮನೆಯಲ್ಲಿಯೇ ಐಸೋಲೆಶನ್‌ಗೆ ನಿರ್ದೇಶನ ನೀಡಿದ್ದು, ಅದನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.

ರೋಗಿಯ ಮನೆ ವಾತಾವರಣ, ಪ್ರತ್ಯೇಕ ಕೋಣೆ, ಕೇರ್‌ಟೇಕರ್, ಸ್ವಂತ ಸಾಮರ್ಥ್ಯಗಳ ಬಗ್ಗೆ ವೈದ್ಯಕೀಯ ತಂಡ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸ ಲಿದೆ. ಅದರಂತೆ ಮನೆ ಸೂಕ್ತವಾಗಿರುವ ಬಗ್ಗೆ ತಂಡ ವರದಿ ನೀಡಿದರೆ ಹೋಮ್ ಐಸೋಲೇಶನ್‌ಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿ ಸಮಸ್ಯೆಗಳಿದ್ದರೆ ರೋಗಿಯನ್ನು ಹೋಮ್ ಐಸೋಲೇಶನ್‌ನಲ್ಲಿ ಇಡುವುದು ಸರಿಯಲ್ಲ. ಅದೇ ರೀತಿ 24 ಗಂಟೆಗಳ ಕಾಲ ಇವರ ಸಂಪರ್ಕದಲ್ಲಿರಲು ಕಾಲ್‌ಸೆಂಟರ್ ವ್ಯವಸ್ಥೆ ಮಾಡು ಬಗ್ಗೆಯೂ ಯೋಚನೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News