ಗಂಜಿಮಠ, ಎಡಪದವು, ಕೈಕಂಬದಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್

Update: 2020-07-12 14:08 GMT

ಮಂಗಳೂರು, ಜು.12: ದೇಶಾದ್ಯಂತ ಕೊರೋನ ಸೋಂಕು ತಾಂಡವವಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಹಲವು ಗ್ರಾಮಗಳು ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ನಿರ್ಧರಿಸಿವೆ.

ಮಂಗಳೂರು ನಗರದ ಹೊರವಲಯದ ಬಜ್ಪೆ, ಉಳ್ಳಾಲ, ಬಂಟ್ವಾಳ, ಮೂಲ್ಕಿ, ಹರೇಕಳ, ಮೂಡುಬಿದಿರೆ, ಕಿನ್ನಿಗೋಳಿ, ಹಳೆಯಂಗಡಿಯಲ್ಲಿ ವರ್ತಕರು ಮುಂದಿನ 15 ದಿನಗಳವರೆಗೆ ಅಪರಾಹ್ನ 2ರಿಂದ ಮರುದಿನ ಬೆಳಗ್ಗೆ 5 ಅಥವಾ 7 ಗಂಟೆಯವರೆಗೆ ತಮ್ಮ ಅಂಗಡಿ-ಮುಂಗಟ್ಟು ಮುಚ್ಚಿಟ್ಟು ಕೊರೋನ ಸೋಂಕು ನಿಯಂತ್ರಣಕ್ಕೆ ಪಣ ತೊಟ್ಟಿದ್ದಾರೆ. ಇದೀಗ ಎಡಪದವು, ಗುರುಪುರ ಕೈಕಂಬ ಹಾಗೂ ಗಂಜಿಮಠದ ವರ್ತಕರೂ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ತೀರ್ಮಾನಿಸಿದ್ದಾರೆ.

ಗುರುಪುರ: ಬಜ್ಪೆ ಸಮೀಪದ ಗುರುಪುರ ಕೈಕಂಬದ ಸಭಾಂಗಣದಲ್ಲಿ ಶನಿವಾರ ಸಂಜೆ ನಾಗರಿಕರು ಮತ್ತು ವ್ಯಾಪಾರಿಗಳು ಸಭೆ ಆಯೋಜಿಸಿದ್ದರು. ಸೋಮವಾರದಂದು ಸ್ವಯಂಪ್ರೇರಿತ ಬಂದ್ ಅವಶ್ಯಕತೆ ಬಗ್ಗೆ ವ್ಯಾಪಾರಿಗಳಿಗೆ ಮೈಕ್ ಮೂಲಕ ಮಾಹಿತಿ ನೀಡಲಾಗುವುದು. ಮಂಗಳವಾರ ಬೆಳಗ್ಗೆ 5ರಿಂದ ಅಪರಾಹ್ನ 2ರವರೆಗೆ ಮಾತ್ರ ಅಂಗಡಿ ತೆರೆದಿಟ್ಟು, ಬಳಿಕ ಬಂದ್ ಮಾಡಲಾಗುವುದೆಂದು ತೀರ್ಮಾನಿಸಲಾಯಿತು.

ಇದಕ್ಕೆ ರಿಕ್ಷಾ ಚಾಲಕರು, ಸಣ್ಣ ವ್ಯಾಪಾರಿಗಳು ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿ ಹಿರಿಯ ಹೋಟೆಲ್ ಉದ್ಯಮಿ ಹರಿರಾವ್ ಕೈಕಂಬ, ಸಾಮಾಜಿಕ ಮುಖಂಡರಾದ ನೌಶಾದ್ ಸೂರಲ್ಪಾಡಿ, ಹರೀಶ್ ಮಟ್ಟಿ, ಯು.ಪಿ. ಇಬ್ರಾಹೀಂ, ಉದ್ಯಮಿ ಜೆರಾಲ್ಡ್ ಲೋಬೊ, ಬಾಷಾ ಮಾಸ್ಟರ್, ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಾಕಿರ್, ಸುನಿಲ್ ಪೂಜಾರಿ, ಡಾ.ಶ್ರೀದೇವಿ ಕೈಕಂಬ, ಕೃಷ್ಣ ಪೂಜಾರಿ, ತುಕರಾಮ ಗುರುಪುರ, ಮುಸ್ಲಿಂ ಧಾರ್ಮಿಕ ಮುಖಂಡ ಅಬೂ ಝೈದ್ ಶಾಫಿ ಮದನಿ ಕರಾಯ, ದಾವೂದ್, ಆರೋಗ್ಯ ಸಿಬ್ಬಂದಿ, ಅಂಗಡಿ ಮಾಲಕರು, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

ಗಂಜಿಮಠ: ಬಜ್ಪೆ ಸಮೀಪದ ಗಂಜಿಮಠದಲ್ಲಿ ನಡೆದ ಸಭೆಯಲ್ಲಿ ಜು.13ರಿಂದ ಅಪರಾಹ್ನ 2ರಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ವ್ಯಾಪಾರ ಬಂದ್ ಅಂಗಡಿ, ರಿಕ್ಷಾ ಮಾಲಕ-ಚಾಲಕರು ನಿರ್ಧರಿಸಿದ್ದಾರೆ.

ಎಡಪದವು: ಇಲ್ಲಿನ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಸಂಜೆ ಸಭೆ ಸೇರಿದ ಸ್ಥಳೀಯ ವರ್ತಕರು, ಮುಖಂಡರು, ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ ಸೋಮವಾರದಿಂದ (ಜು.13) ಜುಲೈ 31ರವರೆಗೆ ಅಪರಾಹ್ನ 2ರಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ಅಂಗಡಿ ಮುಂಗಟ್ಟು ಹಾಗೂ ರಿಕ್ಷಾ, ಕ್ಯಾಬ್ ಬಂದ್ ಮಾಡಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಸಭೆಯಲ್ಲಿ ಜಿಪಂ ಸದಸ್ಯ ಜನಾರ್ದನ ಗೌಡ, ಪಿಡಿಒ ರಾಜೀವಿ ಡಿ. ನಾಯ್ಕ, ಲೆಕ್ಕ ಸಹಾಯಕ ಇಸ್ಮಾಯೀಲ್, ಆರೋಗ್ಯ ಇಲಾಖೆಯ ಕಿರಣ್, ಪಂಚಾಯತ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಾಜಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News