ಬಹರೈನ್‌ನಿಂದ ಮಂಗಳೂರಿಗೆ ಆಗಮಿಸಿದ ಮೊದಲ ವಿಮಾನ

Update: 2020-07-12 16:09 GMT

ಮಂಗಳೂರು, ಜು.12: ವಂದೇ ಭಾರತ್ ಮಿಷನ್‌ನಡಿ ಬಹರೈನ್‌ನಿಂದ ಮಂಗಳೂರಿಗೆ ಮೊದಲ ವಿಮಾನವು ರವಿವಾರ ಸಂಜೆ ಆಗಮಿಸಿದೆ.

ಸ್ಥಳೀಯ ಉದ್ಯಮಿ ಹಾಗೂ ಭಾರತೀಯ ಸಾಗರೋತ್ತರ ಕಾಂಗ್ರೆಸ್(ಐಒಸಿ)ನ ಬಹರೈನ್ ಘಟಕದ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಪ್ರಯತ್ನದಿಂದ ನಿಯೋಜಿಸಲ್ಪಟ್ಟ ಏರ್ ಇಂಡಿಯಾ ಎಕ್ಸ್ ಪ್ರೆಸ್‌ನ ಈ ವಿಶೇಷ ವಿಮಾನವು ರವಿವಾರ ಬೆಳಗ್ಗೆ 10 ಗಂಟೆಗೆ ಬಹರೈನ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಸಂಜೆ 4:45ರ ಸುಮಾರಿಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಈ ವಿಮಾನದಲ್ಲಿ 120 ಪ್ರಯಾಣಿಕರಿದ್ದರು.

ಐಒಸಿ ಬಹರೈನ್ ಸಮಿತಿಯು ಸ್ಥಳೀಯ ರಾಜಮನೆತನದ ಕೆ.ಎಚ್.ಕೆ. ಹೀರೋಸ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಯಾಣದ ಸಂದರ್ಭಕ್ಕಾಗಿ ಪ್ರಯಾಣಿಕರಿಗೆ ಲಘು ಉಪಹಾರದ ಕಿಟ್‌ಗಳನ್ನು ಒದಗಿಸಿಕೊಟ್ಟಿತ್ತು.

 ಕೋವಿಡ್ ಸಂಕಷ್ಟದ ಸಂದರ್ಭ ದುಬೈ, ಮತ್ತಿತರರ ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಹಲವು ವಿಮಾನಗಳ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಬಹರೈನ್‌ನಿಂದ ಮಂಗಳೂರಿಗೆ ವಿಮಾನದ ವ್ಯವಸ್ಥೆ ಆಗಿರಲಿಲ್ಲ. ಇದನ್ನು ಮನಗಂಡ ಐಒಸಿ ಬಹರೈನ್ ಘಟಕದ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಭಾರತೀಯ ದೂತಾವಾಸದೊಡನೆ ಮಾತುಕತೆ ನಡೆಸಿ, ಮಂಗಳೂರಿಗೆ ತುರ್ತಾಗಿ ಆಗಮಿಸಲಿಚ್ಛಿಸುವ ಪ್ರಯಾಣಿಕರಿಗಾಗಿ ವಂದೇ ಭಾರತ್ ಮಿಷನ್‌ನಡಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ವಿಶೇಷ ವಿಮಾನವನ್ನು ನಿಯೋಜಿಸುವಲ್ಲಿ ಶ್ರಮಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News