ಅಶೋಕ್ ಗೆಹ್ಲೋಟ್ ನೇತೃತ್ವದ ಸಭೆಯಲ್ಲಿ 96 ಶಾಸಕರು ಭಾಗಿ: ಪೈಲಟ್ ಗೆ ಹಿನ್ನಡೆ

Update: 2020-07-13 08:23 GMT

ಜೈಪುರ್:  ತಮಗೆ 30 ಮಂದಿ ಕಾಂಗ್ರೆಸ್ ಶಾಸಕರ ಬೆಂಬಲವಿದೆ ಹಾಗೂ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರ ಅಲ್ಪಮತದ ಸರಕಾರವಾಗಿ ಬಿಟ್ಟಿದೆ ಎಂದು ಪಕ್ಷದ ನಾಯಕ ಸಚಿನ್ ಪೈಲಟ್ ನಿನ್ನೆ ಹೇಳಿಕೆ ನೀಡಿದ್ದರು. ಆದರೆ ಇಂದು ಬೆಳಿಗ್ಗೆ ಜೈಪುರ್‍ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ  ಸಭೆಯಲ್ಲಿ ಪೈಲಟ್ ಗೈರು ಹಾಜರಿಯ ನಡುವೆಯೂ ಮುಖ್ಯಮಂತ್ರಿ ಗೆಹ್ಲೋಟ್ ತಮಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಲು ಸಫಲರಾಗಿದ್ದಾರೆ.

ಪೈಲಟ್  ಅವರ ಬೆಂಬಲಕ್ಕೆ ಕೇವಲ 10 ಶಾಸಕರು ಮಾತ್ರವಿದ್ದಾರೆಂಬುದನ್ನು ಗೆಹ್ಲೋಟ್ ಮನದಟ್ಟು ಮಾಡಿದ್ದಾರೆ. ಸಭೆಯಲ್ಲಿ 96 ಶಾಸಕರು  ಭಾಗವಹಿಸಿದ್ದರು.

ಕಾಂಗ್ರೆಸ್ ಸರಕಾರಕ್ಕೆ ಅನುಕೂಲಕರವಾಗಿರುವ ಬೆಳವಣಿಗೆಯ ಹೊರತಾಗಿಯೂ ಪಕ್ಷ ಎಚ್ಚರಿಕೆಯ ನಡೆಯಿಟ್ಟಿದೆ.  ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪತ್ರಿಕಾಗೋಷ್ಠಿ ನಡೆಸಿ  ``ನಮ್ಮ ಜತೆ ಮಾತನಾಡಿ, ನಮ್ಮ ಬಾಗಿಲುಗಳು ತೆರೆದಿವೆ'' ಎಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಂದೇಶವನ್ನೂ ರವಾನಿಸಿದರು.

ಶನಿವಾರ ದಿಲ್ಲಿಗೆ ಮರಳಿದ ಪೈಲಟ್ ಅವರನ್ನು ಸೋನಿಯಾ ಹಾಗೂ ರಾಹುಲ್ ಗಾಂಧಿ ಭೇಟಿಯಾಗಿಲ್ಲವಾದರೂ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸುರ್ಜೇವಾಲ ಹೇಳಿದರು.

ಭಿನ್ನಾಭಿಪ್ರಾಯಗಳು ಸದ್ಯದಲ್ಲಿಯೇ ಶಮನಗೊಳ್ಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. ತರುವಾಯ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಪೈಲಟ್ ತಾವು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News