ತನಿಖೆಗೆ ಆದಿತ್ಯನಾಥ್ ಸರಕಾರ ರಚಿಸಿದ ಎಸ್‍ ಐಟಿಯಲ್ಲಿ ನಕಲಿ ಎನ್‍ ಕೌಂಟರ್ ಆರೋಪ ಹೊತ್ತ ಪೊಲೀಸ್ ಅಧಿಕಾರಿ!

Update: 2020-07-13 08:46 GMT

ಲಕ್ನೋ :  ಕುಖ್ಯಾತ ಪಾತಕಿ ವಿಕಾಸ್ ದುಬೆಯ ಎನ್‍ಕೌಂಟರ್ ಕುರಿತ ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರ ರಚಿಸಿರುವ ವಿಶೇಷ ತನಿಖಾ ದಳದ ಸದಸ್ಯರೊಬ್ಬರಾದ ಡಿಐಜಿ ಜೆ ರವೀಂದರ್ ಗೌಡ್ ಅವರ ವಿರುದ್ಧ ನಿರಪರಾಧಿಯೊಬ್ಬನನ್ನು ನಕಲಿ ಎನ್‍ಕೌಂಟರ್ ಮೂಲಕ 13 ವರ್ಷಗಳ ಹಿಂದೆ ಹತ್ಯೆ ನಡೆಸಿದ ಪ್ರಕರಣದಲ್ಲಿ ಚಾರ್ಜ್ ಶೀಟ್ ಇರುವುದು ಬೆಳಕಿಗೆ ಬಂದಿದೆ.

ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ ರವೀಂದರ್ ಗೌಡ್ ಹೊರತಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಹಾಗೂ ಹೆಚ್ಚುವರಿ ಡಿಜಿಪಿ ಹರಿರಾಮ್ ಶರ್ಮ ಕೂಡ ಇದ್ದಾರೆ.

ಬರೇಲಿಯಲ್ಲಿ ಜೂನ್ 30, 2007ರಂದು ನಡೆದ ಎನ್‍ ಕೌಂಟರ್‍ ನಲ್ಲಿ ಯುವ ಔಷಧಿ ವಿತರಕ ಮುಕುಲ್ ಗುಪ್ತಾ  ಬಲಿಯಾಗಿದ್ದರು. ಆಗ ಗೌಡ್ ಅವರು ಎಎಸ್‍ಪಿ ಆಗಿದ್ದರಲ್ಲದೆ ಹತ್ಯೆಗೀಡಾದ ಗುಪ್ತಾ ಒಬ್ಬ ಮಾಫಿಯಾ ಡಾನ್ ಆಗಿದ್ದ ಹಾಗೂ ಹಲವರು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಎಂದು ಪೊಲೀಸರು ಆಗ ವಾದಿಸಿದ್ದರು. ನಂತರ ಗುಪ್ತಾ ತಂದೆ ಅಲಹಾಬಾದ್ ಹೈಕೋರ್ಟ್ ಕದ ತಟ್ಟಿದ ನಂತರ  ಪ್ರಕರಣದ ಸಿಬಿಐ ತನಿಖೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿಸಿತ್ತು. ನಂತರ ಗೌಡ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ ಅವರ ವಿರುದ್ಧದ ತನಿಖೆಗೆ ಆಗಿನ ಅಖಿಲೇಶ್ ಯಾದವ್ ನೇತೃತ್ವದ ಸರಕಾರ ಅನುಮತಿ ನಿರಾಕರಿಸಿತ್ತು. ಈಗಿನ ಆದಿತ್ಯನಾಥ್ ಸರಕಾರವೂ ಕಾನೂನು ಕ್ರಮಕ್ಕೆ ಅನುಮತಿ ನೀಡಿಲ್ಲ.

ಅಚ್ಚರಿಯೆಂಬಂತೆ ಚಾರ್ಜ್ ಶೀಟ್ ಸಲ್ಲಿಕೆಯಾದ ಒಂದು ವರ್ಷದ ನಂತರ ಎಪ್ರಿಲ್ 2015ರಲ್ಲಿ ಗುಪ್ತಾರ ಹೆತ್ತವರ ಕೊಲೆ ನಡೆದಿತ್ತು. ಆಗ ಪೊಲೀಸರ ಮೇಲೆಯೇ ಅನುಮಾನವಿತ್ತಾದರೂ ಪ್ರಕರಣದ ತನಿಖೆ ಮುಂದುವರಿದಿರಲಿಲ್ಲ.

ಎನ್‍ಕೌಂಟರ್ ಹತ್ಯೆಯ ಆರೋಪವಿರುವ ಅಧಿಕಾರಿಯೊಬ್ಬರನ್ನೇ  ಎಸ್‍ಐಟಿಯಲ್ಲಿ ನೇಮಿಸಿರುವುದು ಹಲವು ಪ್ರಶ್ನೆಗಳನ್ನೆತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News