ಭಾರತದ ಡಿಜಿಟಲ್ ಆರ್ಥಿಕತೆ ಉತ್ತೇಜನಕ್ಕೆ 75,000 ಕೋಟಿ ರೂ. ನಿಧಿ ಘೋಷಿಸಿದ ‘ಗೂಗಲ್’

Update: 2020-07-13 11:27 GMT

ಹೊಸದಿಲ್ಲಿ : ಭಾರತದ ಡಿಜಿಟಲ್ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಗೂಗಲ್ 75,000 ಕೋಟಿ  ರೂ. ನಿಧಿಯನ್ನು  ಘೋಷಿಸಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರಲ್ಲದೆ, ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಬೆಂಬಲಿಸಲು ಗೂಗಲ್ ಹೆಮ್ಮೆ ಪಡುತ್ತದೆ ಎಂದಿದ್ದಾರೆ.

ಅಭಿವೃದ್ಧಿ ಮಾರುಕಟ್ಟೆಗೆ ತನ್ನ ಅತ್ಯಂತ ದೊಡ್ಡ ಕೊಡುಗೆಯನ್ನು ಘೋಷಿಸಿರುವ ಗೂಗಲ್ ಈ ನಿಧಿ ಮುಂದಿನ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಇಕ್ವಿಟಿ ಇನ್ವೆಸ್ಟಮೆಂಟ್ ಹಾಗೂ  ಪಾಲುದಾರಿಕೆ ಮೂಲಕ ವಿನಿಯೋಗಿಸಲಾಗುವುದು ಎಂದು ಹೇಳಿದೆ.

ಈ ಕುರಿತಂತೆ ಸುಂದರ್ ಪಿಚೈ ಇಂದು ಟ್ವೀಟ್ ಕೂಡ ಮಾಡಿದ್ದಾರೆ. ವಾರ್ಷಿಕ ಗೂಗಲ್ ಫಾರ್ ಇಂಡಿಯಾ ವೆಬ್ ಕಾಸ್ಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಈ ಕೊಡುಗೆ , “ಭಾರತದ ಭವಿಷ್ಯ ಹಾಗೂ ಅದರ ಡಿಜಿಟಲ್ ಆರ್ಥಿಕತೆಯ ಮೇಲೆ ನಮಗಿರುವ ವಿಶ್ವಾಸವನ್ನು ಇದು ಪ್ರತಿಫಲಿಸುತ್ತದೆ'' ಎಂದಿದ್ದಾರೆ.

“ಈ ಹೂಡಿಕೆ ಭಾರತದ ಡಿಜಿಟಲೀಕರಣದ ನಾಲ್ಕು ಮುಖ್ಯ ಕ್ಷೇತ್ರಗಳತ್ತ ಗಮನ ಹರಿಸುವುದು, ಮೊದಲನೆಯದಾಗಿ ಪ್ರತಿಯೊಬ್ಬ ಭಾರತೀಯನಿಗೆ ಅವರದ್ದೇ ಆದ ಭಾಷೆಯಲ್ಲಿ, ಅದು ಹಿಂದಿ, ತಮಿಳು, ಪಂಜಾಬಿ ಅಥವಾ ಇನ್ಯಾವುದೋ ಭಾಷೆಯಾಗಿರಬಹುದು, ಆ ಭಾಷೆಯಲ್ಲಿ ಮಾಹಿತಿ ಒದಗಿಸುವುದು, ಎರಡನೆಯದಾಗಿ ಭಾರತದ ವಿಶಿಷ್ಟ ಅಗತ್ಯತೆಗಳಿಗೆ ಅನುಗುಣವಾಗಿ ಹೊಸ ಉತ್ಪನ್ನಗಳು ಹಾಗೂ ಸೇವೆಗಳನ್ನು ಅಭಿವೃದ್ಧಿಪಡಿಸುವುದು, ಮೂರನೆಯದಾಗಿ ಉದ್ಯಮಗಳು ಡಿಜಿಟಲೀಕರಣಕ್ಕೆ ಪರಿವರ್ತನೆಯಾಗುವಾಗ ಅವುಗಳ ಸಬಲೀಕರಣಕ್ಕೆ ಆದ್ಯತೆ ಹಾಗೂ ನಾಲ್ಕನೆಯದಾಗಿ  ಸಾಮಾಜಿಕ  ಹಿತದೃಷ್ಟಿಯಿಂದ ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಸಮತೋಲನ ಸಾಧಿಸುವುದು'' ಎಂದು ಪಿಚೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News