ಬ್ಯಾರಿ ಅಕಾಡಮಿಯಿಂದ 6 ಪುಸ್ತಕಗಳು ಮತ್ತು ಹಾಡಿನ ಸಿಡಿ ಬಿಡುಗಡೆ

Update: 2020-07-13 13:06 GMT

ಮಂಗಳೂರು, ಜು.13: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರಕಟಿಸಿದ 6 ಬ್ಯಾರಿ ಪುಸ್ತಕಗಳು ಮತ್ತು ಹಾಡಿನ ಸಿಡಿ ಬಿಡುಗಡೆ ಕಾರ್ಯಕ್ರಮವು ಸೋಮವಾರ ಮಂಗಳೂರು ತಾಪಂ ಹೊಸ ಕಟ್ಟಡದಲ್ಲಿ ನಡೆಯಿತು.

ಲೇಖಕರಾದ ಫಕ್ರುದ್ದೀನ್ ಇರುವೈಲ್ ಬರೆದ ‘ಮೂನು ಮಿನಿ ಕಾದಂಬರಿಙ’, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಬರೆದ ‘ಬ್ಯಾರಿ ಪಂಚತಂತ್ರ’, ಅನ್ಸಾರ್ ಕಾಟಿಪಳ್ಳ ಬರೆದ ‘ಅಂಗಲಾಪು’, ಶಂಶೀರ್ ಬುಡೋಳಿ ಬರೆದ ‘ಪಿರ್ಸತ್ತೊ ಪಲಕ’, ಹಾರೂನ್ ರಶೀದ್ ಅರ್ಕುಳ ಬರೆದ ‘ಪಾರ್ರೊ ಪಕ್ಕಿ’, ಬಿ.ಎ. ಷಂಶುದ್ದೀನ್ ಬರೆದ ‘ನೆನಪುಙ’ ಹೀಗೆ 6 ಪುಸ್ತಕಗಳು ಮತ್ತು ಹುಸೈನ್ ಕಾಟಿಪಳ್ಳ-ಬಶೀರ್ ಅಹ್ಮದ್ ಕಿನ್ಯ ರಚಿಸಿದ ಬ್ಯಾರಿ ಹಾಡಿನ ಸಿಡಿ ‘ಕಸೊವು’ ವನ್ನು ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಬ್ಯಾರಿ ಮತ್ತು ತುಳು ಮಧ್ಯೆ ಅನ್ಯೋನ್ಯ ಸಂಬಂಧವಿದೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬ್ಯಾರಿಯಿಂದ ತುಳುವಿಗೆ ಮತ್ತು ತುಳುವಿನಿಂದ ಬ್ಯಾರಿಗೆ ಕೃತಿಗಳ ಅನುವಾದವು ಆಗಬೇಕಿದೆ. 8ನೆ ಪರಿಚ್ಛೇದಕ್ಕೆ ತುಳುವನ್ನು ಸೇರಿಸಲು ಬ್ಯಾರಿಭಾಷಿಗರೆಲ್ಲರೂ ಸಹಕಾರ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ‘ಕೊರೋನ-ಲಾಕ್ಡೌನ್ ಮಧ್ಯೆಯೂ ಅಕಾಡಮಿಯ ಕೆಲಸ ಕಾರ್ಯಗಳು ಸದ್ದಿಲ್ಲದೆ ಸಾಗುತ್ತಿದೆ. ವಿವಿಧ 5 ಭಾಷೆಗಳನ್ನು ಒಳಗೊಂಡಂತೆ ಬ್ಯಾರಿ ಶಬ್ದಕೋಶ, ಮರಕೊಗು ಆವಾತೆ 100 ಬ್ಯಾರಿಙ, ರಾಷ್ಟ್ರ-ಅಂತರ್ರಾಷ್ಟ್ರೀಯ ಮಟ್ಟದ 10 ಮಂದಿ ಸಾಧಕರ ಜೀವನ ಚರಿತ್ರೆ ಕೃತಿಯನ್ನು ಬ್ಯಾರಿ ಭಾಷೆಯಲ್ಲಿ ರಚಿಸುವ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ ಎಂದರು.

ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಶಂಶೀರ್ ಬುಡೋಳಿ ಕೃತಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸದಸ್ಯೆ ನಫೀಸತುಲ್ ಮಿಸ್ರಿಯಾ, ತುಳು ಅಕಾಡಮಿಯ ಸದಸ್ಯ ಚೇತನ್ ಪೂಜಾರಿ ಉಪಸ್ಥಿತರಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯರಾದ ಜಲೀಲ್ ಮುಕ್ರಿ ವಂದಿಸಿದರು.ಅಬ್ದುರ್ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News