ಜಾಮಿಯಾ ಹಿಂಸಾಚಾರ: ಎಲ್ಲ ಮನವಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶ

Update: 2020-07-13 15:24 GMT

ಹೊಸದಿಲ್ಲಿ, ಜು, 13: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ವಿವಿಧ ಮನವಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿದೆ.

ದಿಲ್ಲಿ ಪೊಲೀಸರು ಕೆಲವು ದೂರುಗಳಿಗೆ ಮಾತ್ರ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಎಲ್ಲ ದೂರುಗಳಿಗೆ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಕೆಲವು ದೂರುದಾರರ ಪರ ವಕೀಲರು ಮಾಹಿತಿ ನೀಡಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ.

ದಿಲ್ಲಿ ಪೊಲೀಸರು (ಪ್ರತಿವಾದಿ) ಕೆಲವು ದೂರುಗಳಿಗೆ ಸಂಬಂಧಿಸಿ ಮಾತ್ರ ಕ್ರೋಢೀಕೃತ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಎಲ್ಲ ದೂರುಗಳಿಗೆ ಸಂಬಂಧಿಸಿ ಎರಡು ದಿನಗಳ ಒಳಗೆ ಪ್ರತಿಕ್ರಿಯೆ ದಾಖಲಿಸುವಂತೆ ನಾವು ಪ್ರತಿವಾದಿಗಳಿಗೆ ನಿರ್ದೇಶಿಸಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ಎಲ್ಲ ದೂರುಗಳಿಗೆ ಸಂಬಂಧಿಸಿ ಕ್ರೋಢೀಕೃತ ಪ್ರತಿಕ್ರಿಯೆಯನ್ನು ನಾವು ಸಲ್ಲಿಸಿದ್ದೇವೆ ಎಂದು ದಿಲ್ಲಿ ಪೊಲೀಸರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ರಜತ್ ನಾಯರ್ ತಿಳಿಸಿದರು. ಇದಕ್ಕೆ ಪೀಠ, ಪ್ರತಿವಾದಿಗಳು ಎಲ್ಲ ದೂರುಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಹೇಳಿತು.

ಪೊಲೀಸರ ಥಳಿತದಿಂದ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗಳಿಗೆ ಪರಿಹಾರ ಹಾಗೂ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಲ್ಲಿಸಿದ ಮೂರು ಮನವಿಗೆ ಪೊಲೀಸರು ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಕೆಲವು ದೂರುದಾರ ಪರ ಹಿರಿಯ ವಕೀಲ ಕೋಲಿನ್ ಗೊನ್ಸಾಲ್ವೇಸ್ ಹೇಳಿದ್ದಾರೆ.

ಜಾಮಿಯಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ 9 ದೂರುಗಳಲ್ಲಿ 6 ದೂರುಗಳಿಗೆ ಮಾತ್ರ ಪೊಲೀಸರು ಕ್ರೋಢೀಕೃತ ಅಫಿದಾವಿತ್ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News