15 ಶಾಸಕರು ಒಟ್ಟಿಗೆ ಕುಳಿತಿರುವ ವೀಡಿಯೊ ಬಿಡುಗಡೆ ಮಾಡಿದ ಪೈಲಟ್ ಬಣ

Update: 2020-07-14 04:58 GMT

ಹೊಸದಿಲ್ಲಿ, ಜು.14: ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಬಣದೊಂದಿಗೆ ಗುರುತಿಸಿಕೊಂಡಿರುವ ಸುಮಾರು 15 ಶಾಸಕರು ಒಟ್ಟಿಗೆ ಕುಳಿತುಕೊಂಡಿರುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ಬಂಡಾಯ ಸಾರಿರುವ ಪೈಲಟ್ ರವಿವಾರ ತನಗೆ 30 ಶಾಸಕರ ಬೆಂಬಲವಿದೆ. ಅಶೋಕ್ ಗೆಹ್ಲೋಟ್ ಸರಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಹೇಳಿದ್ದರು. ಈಗ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಸಚಿನ್ ಪೈಲಟ್ ಕಾಣುತ್ತಿಲ್ಲ. ಕೆಲವು ಶಾಸಕರು ಕ್ಯಾಮರಾದ ಮುಂದೆ ಕಾಣಿಸಿಕೊಂಡಿದ್ದಾರೆ. ತಾವು ಎಲ್ಲಿದ್ದೇವೆಂದು ಪೈಲಟ್ ಬಣ ಬಹಿರಂಗಪಡಿಸಿಲ್ಲ.

42 ಹರೆಯದ ಪೈಲಟ್ ಅವರು ಗೆಹ್ಲೋಟ್ ವಿರುದ್ಧದ ತನ್ನ ತೀವ್ರ ಅಸಮಾಧಾನವನ್ನು ಹೊರಹಾಕಿದ್ದು, ಶನಿವಾರದಿಂದ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಇಂದು ಬೆಳಗ್ಗೆ ಪೈಲಟ್ ಅವರು ಹರ್ಯಾಣದ ಮನೆಸರ್‌ಗೆ ಭೇಟಿ ನೀಡಲಿದ್ದಾರೆ ಎಂದು ಖಚಿತವಲ್ಲದ ಮೂಲಗಳು ತಿಳಿಸಿವೆ.

ಪೈಲಟ್‌ಗೆ 16 ಶಾಸಕರ ಬೆಂಬಲವಿದೆ ಎಂದು ಕಾಂಗ್ರೆಸ್ ಆರಂಭದಲ್ಲಿ ಹೇಳಿತ್ತು. ಪೈಲಟ್‌ಗೆ 10ರಿಂದ 12 ಶಾಸಕರ ಬೆಂಬಲವಿದೆ ಎಂದು ಸೋಮವಾರ ಸಂಜೆ ಕಾಂಗ್ರೆಸ್ ತನ್ನ ಹೇಳಿಕೆಯನ್ನು ಬದಲಾಯಿಸಿತ್ತು. ಜೈಪುರದಲ್ಲಿ ಸೋಮವಾರ ಬೆಳಗ್ಗೆ ಗೆಹ್ಲೋಟ್ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ 12 ಕಾಂಗ್ರೆಸ್ ಶಾಸಕರು ಗೈರು ಹಾಜರಾಗಿದ್ದರು.

ಸಭೆಯ ಬಳಿಕ ಗೆಹ್ಲೋಟ್ ಸರಕಾರಕ್ಕೆ 106 ಶಾಸಕರ ಬೆಂಬಲವಿದೆ ಎಂದು ಕಾಂಗ್ರೆಸ್ ಅಂದಾಜಿಸಿತ್ತು. ಶಾಸಕಾಂಗ ಪಕ್ಷದ ಸಭೆಯ ಬಳಿಕ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯಿಂದ ಬಚಾವ್ ಮಾಡಲು ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು. ಬಿಜೆಪಿಯು ತನ್ನ ಶಾಸಕರಿಗೆ ಹಣ ನೀಡಿ ತನ್ನತ್ತ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News