ಅನುದಾನ ನೀಡುವಲ್ಲಿ ವಿಳಂಬ: ಮಹತ್ವದ ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಕೈಬಿಟ್ಟ ಇರಾನ್

Update: 2020-07-14 11:01 GMT

ಹೊಸದಿಲ್ಲಿ: ಭಾರತದಿಂದ ಹಣಕಾಸು ಸಹಾಯ ದೊರೆಯುವಲ್ಲಿ ವಿಳಂಬವಾಗಿದೆ ಎಂದು ಹೇಳಿ ಇರಾನ್ ಸರಕಾರ ಚಬಹಾರ್ ಬಂದರು ರೈಲು ಯೋಜನೆಯನ್ನು ತಾನಾಗಿಯೇ ನಡೆಸಲು ಮುಂದಾಗಿರುವ ಕುರಿತಾದ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್  ಪ್ರತಿಕ್ರಿಯಿಸಿ ಇದು ‘ಭಾರತಕ್ಕೆ ದೊಡ್ಡ ನಷ್ಟವಾಗಿದೆ’ ಎಂದು ಹೇಳಿದೆಯಲ್ಲದೆ ಕೇಂದ್ರದ ರಾಜತಾಂತ್ರಿಕ ತಂತ್ರಗಾರಿಕೆಯನ್ನು ಪ್ರಶ್ನಿಸಿದೆ.

“ಚಬಹಾರ್ ಬಂದರು ಒಪ್ಪಂದದಿಂದ ಭಾರತವನ್ನು ಕೈಬಿಡಲಾಗಿದೆ. ಕೆಲಸ ಮಾಡದೆಯೇ ಶ್ರೇಯ ಪಡೆದುಕೊಂಡ ಮೋದಿ ಸರಕಾರದ ರಾಜತಾಂತ್ರಿಕತೆಯಿದು. ಚೀನಾ ಸದ್ದಿಲ್ಲದೆ ಕೆಲಸ ಮಾಡಿ ಅವರಿಗೆ ಉತ್ತಮ ಡೀಲ್ ನೀಡಿದೆ. ಭಾರತಕ್ಕೆ ದೊಡ್ಡ ನಷ್ಟ. ಆದರೆ ನೀವು ಪ್ರಶ್ನೆಗಳನ್ನು ಕೇಳುವ ಹಾಗಿಲ್ಲ” ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.

ಆಂಗ್ಲ ದೈನಿಕವೊಂದರಲ್ಲಿನ ವರದಿಯ ಪ್ರಕಾರ  ಚಬಹಾರ್ ಬಂದರಿನಿಂದ ಅಫ್ಗಾನಿಸ್ತಾನ ಗಡಿಯ ಝಾಹೆದನ್ ತನಕದ ರೈಲು ಹಳಿ ಯೋಜನೆಗೆ ಭಾರತ ಸರಕಾರದ ಅನುದಾನ ನೀಡಿಕೆಯಲ್ಲಿ ಹಾಗೂ ಯೋಜನೆ ಆರಂಭದಲ್ಲಿನ ವಿಳಂಬದಿಂದಾಗಿ ಇರಾನ್ ತಾನಾಗಿಯೇ ಯೋಜನೆ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದೆ.

ಚೀನಾ ಜತೆ 400 ಶತಕೋಟಿ ಡಾಲರ್ ಮೊತ್ತದ  25 ವರ್ಷಗಳ ಪಾಲುದಾರಿಕೆ ಒಪ್ಪಂದವನ್ನು ಇರಾನ್ ಅಂತಿಮಗೊಳಿಸಿದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ. ಈ ಒಪ್ಪಂದದಂತೆ ಚಬಹಾರ್ ಡ್ಯೂಟಿ ಫ್ರೀ ವಲಯ, ಹತ್ತಿರದಲ್ಲಿಯೇ ತೈಲ ಸಂಸ್ಕರಣಾಗಾರ ಹಾಗೂ  ಇತರ  ಯೋಜನೆಗಳಲ್ಲಿ ಚೀನಾ ಭಾಗಿಯಾಗಲಿದೆ.

ಚಬಹಾರ್ ರೈಲು ಯೋಜನೆ ನಿರ್ಮಾಣಕ್ಕೆ ಭಾರತ ಮತ್ತು ಇರಾನ್ ನಾಲ್ಕು ವರ್ಷಗಳ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭಾರತದ ಪ್ರಧಾನಿ ನರೇಂದ್ರ ಮೋದಿ ಟೆಹ್ರಾನ್‍ ಗೆ ಭೇಟಿ ನೀಡಿದ್ದ ಸಂದರ್ಭ ಭಾರತ ಸರಕಾರದ ಇಂಡಿಯನ್ ರೈಲ್ವೇಸ್ ಕನ್‍ಸ್ಟ್ರಕ್ಷನ್ ಲಿ. ಹಾಗೂ ಇರಾನಿಯನ್ ರೈಲ್ವೆ ಸಚಿವಾಲಯದ ನಡುವೆ ಒಪ್ಪಂದ ನಡೆದಿತ್ತು. ಪಾಕಿಸ್ತಾನದ ಗ್ವಾದರ್ ಬಂದರಿನಿಂದ 72 ಕಿಮೀ ದೂರವಿರುವ ಚಬಹಾರ್ ಭಾರತದ ಪಾಲಿಗೆ  ಬಹಳ ಮಹತ್ವದ್ದಾಗಿತ್ತು. ಕಳೆದ ವಾರ ಇರಾನ್ ಸಾರಿಗೆ ಸಚಿವ ಮುಹಮ್ಮದ್ ಇಸ್ಲಾಮಿ ಈ ಯೋಜನೆಗೆ  ಶಂಕುಸ್ಥಾಪನೆ ನೆರವೇರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News