ಲಾಕ್‌ಡೌನ್ ಸಾಲದು, ಜನರ ಕಷ್ಟ ಪರಿಹರಿಸಿ: ದ.ಕ. ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಆಗ್ರಹ

Update: 2020-07-14 13:45 GMT

ಮಂಗಳೂರು, ಜು.14: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಒಂದು ವಾರ ಪೂರ್ಣ ಲಾಕ್‌ಡೌನ್ ಘೋಷಿಸಿದರೆ ಸಾಲದು, ಜನರ ಸಂಕಷ್ಟಗಳಿಗೆ ಸ್ಪಂದಿಸಲು ದ.ಕ. ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿವೆ.

ಕೊರೋನ ಸೋಂಕು ಹತೋಟಿಗೆ ತರಲು ಲಾಕ್‌ಡೌನ್ ಪೂರ್ಣ ಪ್ರಮಾಣದ ಪರಿಹಾರ ಅಲ್ಲದಿದ್ದರೂ, ಜಿಲ್ಲಾಡಳಿತ ಜನತೆಯ ನಡುವೆ ಹರಡಿರುವ ಭೀತಿ ಮುಂದಿಟ್ಟು ಲಾಕ್‌ಡೌನ್ ಮೂಲಕ ಕೊರೋನ ಸೋಂಕು ನಿರ್ವಹಣೆಯಲ್ಲಿನ ವೈಫಲ್ಯಗಳನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ದೂರಿವೆ.

 ಲಾಕ್‌ಡೌನ್‌ನಿಂದಾಗಿ ಉದ್ಯೋಗಾವಕಾಶ ಕಳೆದುಕೊಳ್ಳುವ ಅಸಂಘಟಿತ ಕಾರ್ಮಿಕರು, ಸಣ್ಣ ಸಂಬಳದ ನೌಕರರು ಮುಂತಾದ ಅಂದಂದಿನ ದುಡಿಮೆಯನ್ನೇ ನೆಚ್ಚಿಕೊಂಡಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಇಂಥವರಿಗೆ ಬದುಕು ನಡೆಸುವ ಯಾವ ದಾರಿ ತೋರದೆ, ಪರಿಹಾರ ಒದಗಿಸದೆ ಬೇಜವಾಬ್ದಾರಿತನ ಮೆರೆದಿದೆ.

 ಜಿಲ್ಲಾಡಳಿತದ ಈ ಏಕಪಕ್ಷೀಯ ನಡೆ ಖಂಡಿನೀಯ. ಲಾಕ್‌ಡೌನ್ ಸಂದರ್ಭ ಮನೆಯೊಳಗಡೆ ಬಂದಿಯಾಗುವ ಇಂತಹ ಜನ ವಿಭಾಗಗಳಿಗೆ ಆಹಾರ, ಔಷಧಿ ಮುಂತಾದ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಿ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಮಾನ ಮನಸ್ಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ.

* ಲಾಕ್‌ಡೌನ್ ಸಂದರ್ಭ ದುಡಿಮೆಯ ಅವಕಾಶ ಕಳೆದುಕೊಳ್ಳುವ ಅಸಂಘಟಿತ ಕಾರ್ಮಿಕರು ಸೇರಿದಂತೆ ಬಡವರು, ಕಡಿಮೆ ಆದಾಯದ ಜನವಿಭಾಗಗಳಿಗೆ ಆಹಾರ, ಔಷಧಿಗಳನ್ನು ಜಿಲ್ಲಾಡಳಿತ ಒದಗಿಸಬೇಕು. ಬಾಡಿಗೆ ಮನೆಯಲ್ಲಿ ವಾಸ ಇರುವ ಇಂತಹ ವಿಭಾಗಗಳಿಗೆ ಮನೆ ಬಾಡಿಗೆಯಲ್ಲಿ ವಿನಾಯತಿ ದೊರಕಿಸಬೇಕು.

ಕೊರೋನ ಸೋಂಕಿತರಿಗೆ ಸರಕಾರಿ ಆಸ್ಪತ್ರೆ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆ ಖಾತರಿ ಪಡಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೋನ ಸೋಂಕಿತರ ವೈದ್ಯಕೀಯ ವೆಚ್ಚ, ಆರೋಗ್ಯದ ಸ್ಥಿತಿಗತಿಗಳ ಮೇಲ್ವಿಚಾರಣೆಗೆ ವಿಶೇಷ ತಂಡ ನೇಮಿಸಬೇಕು. ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರವೇ ಚಿಕಿತ್ಸೆ ನೀಡುವುದನ್ನು ಖಾತರಿ ಪಡಿಸಬೇಕು.

* ಖಾಸಗಿ ಆಸ್ಪತ್ರೆಗಳು ಕೊರೋನ ಸೇರಿದಂತೆ ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಸರಕಾರ ನಿಗದಿ ಪಡಿಸಿದ ದರ ಮಾತ್ರ ವಿಧಿಸುವಂತೆ ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ವಿರುದ್ಧ ಕಠಿಣ ದಂಡನೆ ವಿಧಿಸಬೇಕು.

* ಕೊರೋನ ಪರೀಕ್ಷೆ, ಚಿಕಿತ್ಸೆ ಎಲ್ಲ ವಿಭಾಗದ ಜನರಿಗೆ ಉಚಿತವಾಗಿ ದೊರಕಬೇಕು.

* ಖಾಸಗಿ ಆಸ್ಪತ್ರೆಗಳು ಕೋವಿಡ್ ಲಕ್ಷಣಗಳಿಲ್ಲದ ಇತರ ರೋಗಿಗಳಿಗೆ, ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆಗೆ ಬಲವಂತಪಡಿಸುವುದನ್ನು, ವರದಿ ಬರುವುದಕ್ಕೆ ಮುಂಚಿತವಾಗಿ ಕೋವಿಡ್ ವಾರ್ಡ್‌ಗೆ ದಾಖಲಿಸುವುದನ್ನು ನಿರ್ಬಂಧಿಸಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ತಕ್ಷಣ ಬಿಡುಗಡೆಗೊಳಿಸಿ ಹೋಂ ಕ್ವಾರಂಟೈನ್ ಅಥವಾ ಸರಕಾರಿ ಆರೈಕೆ ಕೇಂದ್ರ ಸೇರಿಸುವಂತೆ ಆದೇಶಿಸಬೇಕು. ರೋಗಿಗಳ ದೂರುಗಳನ್ನು ಆಲಿಸಲು ಆರೋಗ್ಯ ಇಲಾಖೆಯ ಪ್ರತಿನಿಧಿಗಳನ್ನು ನೇಮಿಸಬೇಕು.

* ತಕ್ಷಣದಲ್ಲಿ ಜಾರಿಗೆ ಬರುವಂತೆ ಖಾಸಗಿ ಕಾಲೇಜುಗಳ ಹಾಸ್ಟೆಲ್, ಸಭಾಂಗಣಗಳನ್ನು ಬಳಸಿ ಸರಕಾರಿ ಆರೈಕೆ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆ ಸಂಖ್ಯೆಯಲ್ಲಿ ತೆರೆಯಬೇಕು. ಅವುಗಳಿಗೆ ಸರಿಯಾದ ಮೂಲಭೂತ ಸೌಲಭ್ಯ ಒದಗಿಸಿ, ರೋಗ ಲಕ್ಷಣಗಳಿಲ್ಲದ/ ಸೌಮ್ಯ ರೋಗಲಕ್ಷಣ ಇರುವವರನ್ನು ಅಲ್ಲಿಗೆ ದಾಖಲಿಸಬೇಕು. ಆಸ್ಪತ್ರೆಗಳ ಹಾಸಿಗೆಗಳನ್ನು ಗಂಭೀರ ರೋಗ ಲಕ್ಷಣ ಇರುವ ರೋಗಿಗಳಿಗೆ ಮೀಸಲಿರಿಸಬೇಕು.

 * ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆಗಳು ದೊರಕುತ್ತಿಲ್ಲ. ಇದರಿಂದಾಗಿ ಸಾವು ಸಂಭವಿಸುತ್ತಿವೆ ಎಂಬ ದೂರುಗಳು ಬರುತ್ತಿದ್ದು, ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ವೆನ್ಲಾಕ್‌ಗೆ ತಜ್ಞ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು.

* ಮಳೆಗಾಲದ ಕಾರಣ ಶೀತ, ಕೆಮ್ಮು ಜ್ವರದಂತಹ ಸಾಮಾನ್ಯ ಲಕ್ಷಣಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಇಂತಹ ಲಕ್ಷಣ ಉಳ್ಳವರಿಗೆ ಕೋವಿಡ್ ಕಾರಣ ಮುಂದಿಟ್ಟು ಖಾಸಗಿ ಕ್ಲಿನಿಕ್ ಗಳಲ್ಲಿ ಔಷಧಿ ನೀಡುತ್ತಿಲ್ಲ. ಇದು ತಪ್ಪಾದ ವಿಧಾನವಾಗಿದ್ದು, ಸಾಮಾನ್ಯ ಜ್ವರಕ್ಕೆ ಖಾಸಗಿ ಕ್ಲಿನಿಕ್ ಗಳು ಔಷಧಿ ನೀಡಬೇಕು. ಸರಕಾರಿ ಫೀವರ್ ಕ್ಲಿನಿಕ್‌ಗಳನ್ನು ಜನವಸತಿ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

 ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಹ ಸಂಚಾಲಕ ಎಂ.ದೇವದಾಸ್, ಫಾರಂ ಫಾರ್ ಜಸ್ಟಿಸ್ ಮಂಗಳೂರು ಅಧ್ಯಕ್ಷ ಹಾಗೂ ನ್ಯಾಯವಾದಿ ದಯಾನಾಥ ಕೋಟ್ಯಾನ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಚಾಲಕ ರವಿಕಿರಣ ಪುಣಚ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, ನಾಡದೋಣಿ ಮೀನುಗಾರರ ಸಂಘದ ಮುಖಂಡ ಶರತ್ ಗುಡ್ಡೆಕೊಪ್ಲ, ಸಮುದಾಯ ಕರ್ನಾಟಕದ ವಿಭಾಗದ ಸಂಚಾಲಕ ವಾಸುದೇವ ಉಚ್ಚಿಲ, ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದಸಂಸ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಹೋರಾಟ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಿಶು ಕುಮಾರ್ ಅವರನ್ನು ಒಳಗೊಂಡ ದ.ಕ. ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಪ್ರಕಟನೆಯಲ್ಲಿ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News