ವಿದೇಶಿ ವಿದ್ಯಾರ್ಥಿಗಳ ನೂತನ ವೀಸಾ ನಿಯಮ ಪ್ರಶ್ನಿಸುವ ಮೊಕದ್ದಮೆಗೆ ಗೂಗಲ್, ಮೈಕ್ರೋಸಾಫ್ಟ್, ಫೇಸ್ಬುಕ್ ಬೆಂಬಲ

Update: 2020-07-14 15:03 GMT

ವಾಶಿಂಗ್ಟನ್, ಜು. 14: ವಿದೇಶಿ ವಿದ್ಯಾರ್ಥಿಗಳು ಕನಿಷ್ಠ ಒಂದಾದರೂ ಕೋರ್ಸ್ ಗೆ ನೋಂದಾಯಿಸಿಕೊಳ್ಳದಿದ್ದರೆ ಅವರಿಗೆ ಅಮೆರಿಕದಲ್ಲಿ ಉಳಿಯಲು ಅವಕಾಶ ನೀಡದಿರುವ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಇಲಾಖೆಯ ನಿಯಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಮ್ಯಾಸಚೂಸಿಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಗೂಗಲ್, ಫೇಸ್ಬುಕ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕದ ಡಝನ್ಗೂ ಅಧಿಕ ತಂತ್ರಜ್ಞಾನ ಕಂಪೆನಿಗಳು ಬೆಂಬಲ ಸೂಚಿಸಿವೆ.

ವಿದೇಶಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನೂತನ ವೀಸಾ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕು ಎಂಬುದಾಗಿ ಈ ಕಂಪೆನಿಗಳು ಕೋರಿವೆ. ಅಮೆರಿಕ ವಾಣಿಜ್ಯ ಸಂಸ್ಥೆ ಮತ್ತು ಇತರ ಮಾಹಿತಿ ತಂತ್ರಜ್ಞಾನ ಪರವಾಗಿ ವಕಾಲತ್ತು ನಡೆಸುವ ಗುಂಪುಗಳು ಈ ಕಂಪೆನಿಗಳ ಜೊತೆಗೆ ನಿಂತಿವೆ.

ಜುಲೈ 6ರಂದು ಐಸಿಇ ಪ್ರಕಟಿಸಿದ ನಿಯಮವು ತಮ್ಮ ನೇಮಕಾತಿ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಿರುವ ಈ ತಂತ್ರಜ್ಞಾನ ಕಂಪೆನಿಗಳು, ವಿದೇಶಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ ಕಂಪೆನಿಗಳಿಗೆ ಇನ್ನು ಅವರನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿವೆ. ಅದೂ ಅಲ್ಲದೆ, ನೂತನ ನಿಯಮದಿಂದ ನೇಮಕಾತಿ ಪ್ರಕ್ರಿಯೆಯು ವ್ಯತ್ಯಯಗೊಳ್ಳಲಿದೆ ಎಂದಿವೆ. ಈ ಕಂಪೆನಿಗಳು ತಮ್ಮ ಭವಿಷ್ಯದ ಉದ್ಯೋಗಿಗಳನ್ನು ಗುರುತಿಸಲು ಹಾಗೂ ಅವರಿಗೆ ತರಬೇತಿ ನೀಡಲು ಇದೇ ನೇಮಕಾತಿ ಪ್ರಕ್ರಿಯೆಯನ್ನು ಅವಲಂಬಿಸಿವೆ ಎಂದು ದೈತ್ಯ ತಂತ್ರಜ್ಞಾನ ಕಂಪೆನಿಗಳು ಹೇಳಿವೆ.

 ‘ನಮ್ಮ ಪ್ರತಿಸ್ಪರ್ಧಿಗಳ ಬಳಿ ಕೆಲಸ ಮಾಡಲು ಅವರನ್ನು ಕಳುಹಿಸಿಕೊಡುತ್ತಿದ್ದೇವೆ’

ಜುಲೈ 6ರ ನಿಯಮದಿಂದಾಗಿ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳಿಗೆ ಸಿಪಿಟಿ ಮತ್ತು ಒಪಿಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ‘‘ಅಮೆರಿಕದಲ್ಲಿನ ಅವರ ಶಿಕ್ಷಣದ ಮೇಲಿನ ಹೂಡಿಕೆಯ ಪ್ರಯೋಜನವನ್ನು ಪಡೆಯುವ ಬದಲು, ಅಮೆರಿಕವು ಅವರನ್ನು ವಿವೇಚನಾರಹಿತವಾಗಿ, ನಮ್ಮ ಜಾಗತಿಕ ಪ್ರತಿಸ್ಪರ್ಧಿಗಳ ಬಳಿ ಕೆಲಸ ಮಾಡಲು ಹಾಗೂ ಆ ಮೂಲಕ ನಮ್ಮ ವಿರುದ್ಧ ಸ್ಪರ್ಧಿಸಲು ಕಳುಹಿಸಿಕೊಡುತ್ತಿದೆ’’ ಎಂದು ತಂತ್ರಜ್ಞಾನ ಕಂಪೆನಿಗಳು ಅಭಿಪ್ರಾಯಪಟ್ಟಿವೆ.

ನಿಯಮವನ್ನು ಪ್ರಶ್ನಿಸಿ 17 ರಾಜ್ಯಗಳು ನ್ಯಾಯಾಲಯಕ್ಕೆ

ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ವಾಸಿಸುವುದನ್ನು ನಿರ್ಬಂಧಿಸುವ ಅಮೆರಿಕದ ನೂತನ ವೀಸಾ ನಿಯಮಗಳನ್ನು ಪ್ರಶ್ನಿಸಿ ದೇಶದ 17 ರಾಜ್ಯಗಳು ಮತ್ತು ಕೊಲಂಬಿಯ ಜಿಲ್ಲೆ ಸೋಮವಾರ ಮ್ಯಾಸಚೂಸಿಟ್ಸ್ ನ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿವೆ.

ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಮತ್ತು ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಇಲಾಖೆಯನ್ನು ಅವುಗಳು ಪ್ರತಿವಾದಿಗಳನ್ನಾಗಿಸಿವೆ.

ಕೊರೋನ ವೈರಸ್ ಅಮೆರಿಕದಾದ್ಯಂತ ಸಾವು ಮತ್ತು ನಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿರುವ ಸಮಯದಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಹೊರದಬ್ಬಲು ಕೇಂದ್ರ ಸರಕಾರ ‘‘ಕ್ರೂರ, ಹಠಾತ್ ಮತ್ತು ಕಾನೂನುಬಾಹಿರ’’ ಕ್ರಮವನ್ನು ತೆಗೆದುಕೊಂಡಿದೆ ಎಂದು ಈ ರಾಜ್ಯಗಳು ತಮ್ಮ ಮೊಕದ್ದಮೆಯಲ್ಲಿ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News