ವರವರ ರಾವ್ ಅವರಿಂದ ದೇಶಕ್ಕೆ ಬೆದರಿಕೆ ಇಲ್ಲ

Update: 2020-07-14 16:34 GMT

ಕೋಲ್ಕೊತ್ತಾ, ಜು. 14: ಮಹಾರಾಷ್ಟ್ರದ ಎಲ್ಗಾರ್ ಪರಿಷತ್ ಹಾಗೂ ಮಾವೋವಾದಿ ನಂಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ತೆಲುಗು ಕವಿ ವರವರ ರಾವ್ ಅವರನ್ನು ಬಿಡುಗಡೆ ಮಾಡಲು ಮಧ್ಯಪ್ರವೇಶಿಸುವಂತೆ ಕೋರಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

81ರ ಹರೆಯದಲ್ಲಿರುವ ರಾವ್ ಅವರು ಜಗತ್ತಿನ ಅತಿ ಬಲಿಷ್ಠ ರಾಷ್ಟ್ರಕ್ಕೆ ಬೆದರಿಕೆ ಆಗಲು ಸಾಧ್ಯವಿಲ್ಲ ಎಂದು ಚೌಧುರಿ ಪತ್ರದಲ್ಲಿ ಹೇಳಿದ್ದಾರೆ.

ತನ್ನ ಅಪರಾಧ ಏನೆಂದೇ ತಿಳಿಯದೆ 81 ವರ್ಷದ ವ್ಯಕ್ತಿಯೋರ್ವರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರು ಮಾನಸಿಕವಾಗಿ ದಿಗ್ಭ್ರಮೆಗೊಂಡಿದ್ದಾರೆ. ಅವರಿಗೆ ಯಾವುದೇ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

  ‘‘ದಯವಿಟ್ಟು ನೀವು ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ ಹಾಗೂ ಅವರ ಜೀವ ರಕ್ಷಿಸಿ. ಇಲ್ಲದೇ ಇದ್ದರೆ, ನಮ್ಮ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸದು’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಎಲ್ಗಾರ್ ಪರಿಷತ್ ಹಾಗೂ ಮಾವೋವಾದಿ ನಂಟು ಪ್ರಕರಣಕ್ಕೆ ಸಂಬಂಧಿಸಿ ರಾವ್ ಹಾಗೂ 9 ಮಂದಿಯನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಈ ಪ್ರಕರಣದ ಬಗ್ಗೆ ಪುಣೆ ಪೊಲೀಸರು ತನಿಖೆ ನಡೆಸಿದರು. ಅನಂತರ ಕಳೆದ ವರ್ಷ ಜನವರಿಯಲ್ಲಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News