ಸಚಿನ್ ಪೈಲಟ್ ಕೈಯಲ್ಲಿ ಏನಿಲ್ಲ, ಬಿಜೆಪಿಯೇ ಸೂತ್ರಧಾರ: ಅಶೋಕ್ ಗೆಹ್ಲೋಟ್

Update: 2020-07-14 16:37 GMT

ಜೈಪುರ, ಜು.14: ಸಚಿನ್ ಪೈಲಟ್ ವಿರುದ್ಧ ಕೈಗೊಂಡಿರುವ ಶಿಸ್ತುಕ್ರಮವನ್ನು ಸಮರ್ಥಿಸಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಚಿನ್ ರನ್ನು ಬಿಜೆಪಿ ದಾರಿತಪ್ಪಿಸಿದೆ. ಸಚಿನ್ ನಡೆಸಿರುವ ಬಂಡಾಯದ ಹಿಂದೆ ಬಿಜೆಪಿಯ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.

  ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿನ್ ಹಾಗೂ ಇತರ ಇಬ್ಬರು ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡುವ ನಿರ್ಧಾರಕ್ಕೆ ಬರಲಾಗಿದೆ. ಹಾಗಿದ್ದರೂ, ಮಾತುಕತೆಗೆ ಬರುವಂತೆ ಸಚಿನ್ ರನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಆಹ್ವಾನಿಸಿದೆ.

ಸಭೆಯ ಬಳಿಕ ಮಾತನಾಡಿದ ಗೆಹ್ಲೋಟ್, ಸಚಿನ್ ವಿರುದ್ಧ ಕೈಗೊಂಡಿರುವ ಕ್ರಮವನ್ನು ಸಮರ್ಥಿಸಿಕೊಂಡರು. ದೀರ್ಘಾವಧಿಯಿಂದ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಪ್ರಯತ್ನ ಮುಂದುವರಿಸಿರುವುದರಿಂದ ಹೈಕಮಾಂಡ್ ಅನಿವಾರ್ಯವಾಗಿ ಶಿಸ್ತುಕ್ರಮ ಕೈಗೊಳ್ಳಬೇಕಾಗಿದೆ ಎಂದರು.

  ಇದೊಂದು ದೊಡ್ಡ ಷಡ್ಯಂತ್ರ ಎಂಬುದು ನಮಗೆ ತಿಳಿದಿದೆ. ಇದರಿಂದ ದಾರಿ ತಪ್ಪಿದ ನಮ್ಮ ಕೆಲವು ಮಿತ್ರರು ದಿಲ್ಲಿಗೆ ತೆರಳಿದ್ದಾರೆ. ಬಿಜೆಪಿ ಮತ್ತು ಬಂಡಾಯ ಶಾಸಕರ ಮಧ್ಯೆ ಒಪ್ಪಂದ ನಡೆದಿದೆ. ಈಗ ಅವರು ತಾತ್ಕಾಲಿಕವಾಗಿ ಹೊಸ ಪಕ್ಷ ಸ್ಥಾಪಿಸಬಹುದು ಅಥವಾ ನೇರವಾಗಿ ಬಿಜೆಪಿ ಸೇರಬಹುದು. ಇದೆಲ್ಲಾ ಶೀಘ್ರವೇ ಸ್ಪಷ್ಟವಾಗಲಿದೆ. ಬಿಜೆಪಿಯು ರೆಸಾರ್ಟ್ ವ್ಯವಸ್ಥೆ ಸಹಿತ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಕೆಲಸ ಮಾಡಿದ್ದ ಬಿಜೆಪಿಯ ತಂಡವೇ ಇಲ್ಲಿಯೂ ಕೆಲಸಕ್ಕಿಳಿದಿದೆ ಎಂದು ಗೆಹ್ಲೋಟ್ ಹೇಳಿದರು.

 ಬಿಜೆಪಿಯ ಆಶಯ ಫಲಿಸದು. ಕರ್ನಾಟಕ, ಮಧ್ಯಪ್ರದೇಶದಲ್ಲಿ ಹಣದ ಬಲದಿಂದ ಅವರು ಆಡಿರುವ ಆಟವನ್ನು ರಾಜಸ್ತಾನದಲ್ಲೂ ನಡೆಸಲು ಮುಂದಾಗಿದ್ದಾರೆ. ಆಟವನ್ನು ಬಹಿರಂಗವಾಗಿ ಆಡಬೇಕು. ಬಹಿರಂಗ ಆಟದಲ್ಲಿ ಇಂತಹ ಜನ ಸೋಲುತ್ತಾರೆ ಎಂದು ಗೆಹ್ಲೋಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತನಗೆ 30 ಶಾಸಕರ ಬೆಂಬಲವಿದೆ ಎಂದು ಸಚಿನ್ ಪೈಲಟ್ ಹೇಳಿಕೊಂಡರೂ, ಅವರ ಬಳಿ ಇರುವ ಶಾಸಕರ ಸಂಖ್ಯೆ 20 ಎಂದು ನಿಕಟ ಮೂಲಗಳು ಹೇಳಿವೆ. ಈ ಮಧ್ಯೆ, ಇಬ್ಬರು ಶಾಸಕರನ್ನು ಹೊಂದಿರುವ ಭಾರತೀಯ ಟ್ರೈಬಲ್ ಪಕ್ಷ, ಒಂದು ವೇಳೆ ವಿಶ್ವಾಸಮತ ಪ್ರಕ್ರಿಯೆ ನಡೆದರೆ ತಮ್ಮ ಪಕ್ಷ ತಟಸ್ತವಾಗಿರಲಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News