ಇನ್ನು ಮುಂದೆ ವಲಸೆ ಕಾರ್ಮಿಕರ ಮಕ್ಕಳ ಶಾಲೆ ಪ್ರವೇಶಕ್ಕೆ ಟಿಸಿ ಕೇಳುವಂತಿಲ್ಲ...

Update: 2020-07-14 16:42 GMT

 ಹೊಸದಿಲ್ಲಿ, ಜು.14: ವಲಸೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಂಗಳವಾರ ಬಿಡುಗಡೆಗೊಳಿಸಿದ್ದು, ಲಾಕ್ ಡೌನ್ ಮತ್ತಿತರ ಕಾರಣಗಳಿಂದ ಊರಿಗೆ ಮರಳಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಸಂಬಂಧಿಸಿ ದತ್ತಾಂಶವನ್ನು ಸಿದ್ಧಪಡಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ಕೊರೋನ ಪಿಡುಗಿನಿಂದಾಗಿ ತವರಿಗೆ ಮರಳಿದ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಾಗ ಟಿಸಿ ಅಥವಾ ಈ ಹಿಂದೆ ತರಗತಿಗೆ ಹಾಜರಾದ ಬಗ್ಗೆ ಪುರಾವೆಯನ್ನು ಕೇಳಬಾರದು. ಯಾವುದಾದರೂ ಗುರುತು ಪತ್ರವಿದ್ದರೆ ಸಾಕು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳಬೇಕು ಎಂದು ಎಲ್ಲಾ ಶಾಲೆಗಳಿಗೆ ಆದೇಶ ರವಾನಿಸುವಂತೆ ಇಲಾಖೆಯು ರಾಜ್ಯ ಸರಕಾರಗಳಿಗೆ ಸಲಹೆ ನೀಡಿದೆ.

ವಿದ್ಯಾರ್ಥಿಗಳ ಹೆತ್ತವರು ನೀಡುವ ಮಾಹಿತಿ ಸರಿಯಾಗಿದೆ ಎಂದು ಪರಿಗಣಿಸಿ, ವಿದ್ಯಾರ್ಥಿ ವಾಸವಿರುವ ಅಥವಾ ನೆರೆಯ ಸರಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ಸಂಬಂಧಿಸಿದ ತರಗತಿಗೆ ದಾಖಲಾತಿ ಮಾಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

  ಈ ಮಕ್ಕಳು ಯಾವುದೇ ಸಂದರ್ಭ ಹಿಂದಿರುಗುವ ಸಾಧ್ಯತೆ ಇರುವುದರಿಂದ ಶಾಲೆಯ ಪಟ್ಟಿಯಿಂದ ಯಾವುದೇ ವಿದ್ಯಾರ್ಥಿಯ ಹೆಸರನ್ನು ಅಳಿಸಿ ಹಾಕಬಾರದು. ಮಕ್ಕಳ ಹೆತ್ತವರು ಅಥವಾ ಪಾಲಕರನ್ನು ಫೋನ್, ವಾಟ್ಸಾಪ್ ಅಥವಾ ನೆರೆಮನೆಯವರ ಮೂಲಕ ಸಂಪರ್ಕಿಸಿ ದತ್ತಾಂಶವನ್ನು ತಯಾರಿಸಬೇಕು. ಅಲ್ಲದೆ ಈ ಅವಧಿಯಲ್ಲಿ ಅವರು ನೆಲೆಸಿರುವ ತಾತ್ಕಾಲಿಕ ಸ್ಥಳವನ್ನೂ ದಾಖಲಿಸಬೇಕು. ಈಗ ಆ ಸ್ಥಳವನ್ನು ಬಿಟ್ಟು ತೆರಳಿರುವ ಮಕ್ಕಳ ಹೆಸರನ್ನು ದಾಖಲಾತಿ ಸಂದರ್ಭದಲ್ಲಿ ‘ವಲಸೆ ಹೋದವರು ಅಥವಾ ತಾತ್ಕಾಲಿಕವಾಗಿ ಅಲಭ್ಯವಾಗಿರುವವರು’ ಎಂದು ಪ್ರತ್ಯೇಕವಾಗಿ ತೋರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

 ಇಂತಹ ಮಕ್ಕಳ ಸಂಖ್ಯೆಯನ್ನು ವರ್ಗವಾರು ಆಧಾರದಲ್ಲಿ ಶಿಕ್ಷಣ ನಿರ್ದೇಶನಾಲಯಕ್ಕೆ ವರದಿ ರೂಪದಲ್ಲಿ ಸಲ್ಲಿಸಿದರೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯದ ಮಾರ್ಗಸೂಚಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News