ನಾಳೆಯಿಂದ 20 ದಿನಗಳ ಕಾಲ ಭಾರತದ ಆಗಸದಲ್ಲಿ ‘ನಿಯೊವೈಸ್’ ಧೂಮಕೇತು!

Update: 2020-07-14 16:44 GMT

ಹೊಸದಿಲ್ಲಿ, ಜು.14: ಸಿ/2020 ಎಫ್3 ನಿಯೊವೈಸ್ ಎಂಬ ಅಪರೂಪದ ಧೂಮಕೇತು ಜುಲೈ 14ರಿಂದ ಭಾರತದಲ್ಲಿ ಬಾನಂಗಳದಲ್ಲಿ ಗೋಚರವಾಗಲಿದೆ. ಬರಿಗಣ್ಣಿನಲ್ಲೂ ಇದನ್ನು ಮುಂದಿನ 20 ದಿನ ವೀಕ್ಷಿಸಬಹುದಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸ ಹೇಳಿದೆ.

ಭಾರತದ ವಾಯುವ್ಯ ಆಗಸದಲ್ಲಿ ಸೂರ್ಯಾಸ್ತಮಾನದ ಬಳಿಕದ 15ರಿಂದ 20 ನಿಮಿಷ ಧೂಮಕೇತು ಗೋಚರಿಸುತ್ತದೆ. 20 ದಿನದ ಬಳಿಕ ಈ ಅಸ್ಪಷ್ಟ ಧೂಮಕೇತು ಮಸುಕಾಗುವ ನಿರೀಕ್ಷೆಯಿದೆ. ಆದ್ದರಿಂದ ಬೈನಾಕ್ಯುಲರ್ ಅಥವಾ ಸಣ್ಣ ದೂರದರ್ಶಕಗಳ ಮೂಲಕ ವೀಕ್ಷಿಸಬಹುದು. ಈ ಅವಕಾಶ ತಪ್ಪಿಸಿಕೊಂಡರೆ ಮುಂದೆ 6,800 ವರ್ಷಗಳ ಬಳಿಕ ಮತ್ತೊಮ್ಮೆ ಭೂಮಿಯನ್ನು ಸಮೀಪಿಸಲಿದೆ ಎಂದು ನಾಸದ ವಿಜ್ಞಾನಿಗಳು ಹೇಳಿದ್ದಾರೆ.

   ಧೂಮಕೇತುವಿನ ವಯಸ್ಸಿನಿಂದಾಗಿ ಇದರ ವೀಕ್ಷಣೆಗೆ ಹೆಚ್ಚಿನ ಆಕರ್ಷಣೆಯಿದೆ. ನಿಯೊವೈಸ್ ಧೂಮಕೇತು 4 ಬಿಲಿಯನ್ ವರ್ಷಕ್ಕೂ ಅಧಿಕ ಸಮಯದಿಂದ ವಿಶ್ವದಾದ್ಯಂತ ಸಂಚರಿಸುವಾಗ ಸಂಗ್ರಹವಾದ ಅಂತರ್ ತಾರಾಗಣದ ಕಣಗಳನ್ನು ಹೊಂದಿದೆ ಎಂದು ನಂಬಲಾಗಿದ್ದು 6,800 ವರ್ಷಕ್ಕೆ ಒಮ್ಮೆ ಭೂಮಿಯನ್ನು ಸಮೀಪಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಾಸಾದ ಅಂತರ್ ತಾರಾ ವಸ್ತು ವೀಕ್ಷಣೆ ಯೋಜನೆಯಿಂದ ಧೂಮಕೇತುವಿಗೆ ನಿಯೊವೈಸ್ ಎಂಬ ಹೆಸರು ಬಂದಿದೆ. ಸೂರ್ಯನ ಸಾಮೀಪ್ಯವು ಧೂಮಕೇತುವಿನ ಹೊರ ಪದರವನ್ನು ಸುಟ್ಟು ಹಾಕಿದೆ. ಈ ಕಾರಣದಿಂದ ಧೂಳು, ಅನಿಲ ಮತ್ತು ಭಗ್ನಾವಶೇಷಗಳು ಅದರ ಹಿಮಾವೃತ ದ್ರವ್ಯರಾಶಿ(ಸುಮಾರು 3 ಮೈಲಿ ಅಗಲವಿದೆ)ಯಿಂದ ಹೊರಹೊಮ್ಮಲು ಆರಂಭಿಸಿತು. ಧೂಮಕೇತು ಇನ್ನೂ ಉರಿಯುತ್ತಿರುವ ದ್ರವ್ಯರಾಶಿಯನ್ನು ಉಳಿಸಿಕೊಂಡಿರುವುದರಿಂದ ಆಕರ್ಷಕ ನೋಟವನ್ನು ಹೊಂದಿದೆ ಎಂದು ನಾಸಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News