ಡಾ. ಕಫೀಲ್ ಖಾನ್ ಬಿಡುಗಡೆಗೆ ಆಗ್ರಹಿಸಿ ವೈದ್ಯರಿಂದ ಟ್ವಿಟರ್ ಅಭಿಯಾನ

Update: 2020-07-14 17:09 GMT

ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಡಾ.ಕಫೀಲ್ ಖಾನ್ ರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ನೂರಾರು ಮಂದಿ ಇಂದು ಟ್ವಿಟರ್ ನಲ್ಲಿ #FreeDrKafeel ಹ್ಯಾಶ್ ಟ್ಯಾಗ್ ಅಭಿಯಾನವನ್ನು ನಡೆಸಿದರು.

ಈ ಅಭಿಯಾನಕ್ಕೆ ಹಲವು ವೈದ್ಯರು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವರು ಕೈಜೋಡಿಸಿದ್ದು, 1 ನಿಮಿಷದ ವಿಡಿಯೋ ಮಾಡಿ ಕಫೀಲ್ ಖಾನ್ ರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಕೊರೋನ ಸಮಯದಲ್ಲಿ ವೈದ್ಯರು ಇರಬೇಕಾದ ಸ್ಥಳ ಜೈಲಲ್ಲ, ಬದಲಾಗಿ ಆಸ್ಪತ್ರೆ ಎಂದ ಅವರು, ಸರಕಾರವು ಕಫೀಲ್  ಖಾನ್ ರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಮಂಗಳವಾರ ಮಧ್ಯಾಹ್ನದ ನಂತರ ನಡೆಯುವ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಇದಕ್ಕೂ ಮೊದಲು ಪ್ರೊಗೆಸಿವ್ ಮೆಡಿಕೋಸ್ ಆ್ಯಂಡ್ ಸೈಂಟಿಸ್ಟ್ಸ್ ಫೋರಂ  ತನ್ನ ಸದಸ್ಯರಿಗೆ ಕರೆ ನೀಡಿತ್ತು. ಇದರ ಪರಿಣಾಮ ನೂರಾರು ವೈದ್ಯರು ಈ ಅಭಿಯಾನಕ್ಕೆ ಕೈಜೋಡಿಸಿದ್ದು, 1 ಲಕ್ಷಕ್ಕೂ ಅಧಿಕ ಬಾರಿ ಈ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಲಾಗಿದೆ.

‘ಕಫೀಲ್ ಖಾನ್ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ’ ಅಭಿಯಾನಕ್ಕೆ ಕೈಜೋಡಿಸುವಂತೆ ಪ್ರೊಗೆಸಿವ್ ಮೆಡಿಕೋಸ್ ಆ್ಯಂಡ್ ಸೈಂಟಿಸ್ಟ್ಸ್ ಫೋರಂ  ವೈದ್ಯಕೀಯ ಕ್ಷೇತ್ರಕ್ಕೆ ಕರೆ ನೀಡಿದ್ದು, ಕಫೀಲ್ ಖಾನ್ 2017ರ ಗೋರಖ್ ಪುರ ದುರಂತಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರಕಾರ ನಡೆಸುತ್ತಿದ್ದ ರಾಜಕೀಯ ದ್ವೇಷದ ಸಂತ್ರಸ್ತ ಎಂದಿದೆ.

ಕಫೀಲ್ ಖಾನ್ ಬಿಡುಗಡೆಗೆ ಆಗ್ರಹಿಸಿ ಡಾ. ಹರ್ಜಿತ್ ಸಿಂಗ್ ಭಟ್ಟಿ, ಯೋಗೇಂದ್ರ ಯಾದವ್ , ಉಮರ್ ಖಾಲಿದ್, ಹಲವು ವೈದ್ಯರು, ಪತ್ರಕರ್ತರು, ರಾಜಕೀಯ ವಿಶ್ಲೇಷಕರು, ಹೋರಾಟಗಾರರು ವಿಡಿಯೋ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News