ಅಂಗವೈಕಲ್ಯ, ಬಡತನವನ್ನು ಮೀರಿ‌ ಸಾಧನೆ ಮೆರೆದ ಭಾಗ್ಯಶ್ರೀ

Update: 2020-07-15 05:12 GMT

ಬಂಟ್ವಾಳ, ಜು.15: ಬಡತನ, ಅಂಗ ವೈಕಲ್ಯವನ್ನು ಮೀರಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 467 ಅಂಕಗಳನ್ನು ಗಳಿಸುವ ಮೂಲಕ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ದಂಪತಿಯ ಪುತ್ರಿ ಭಾಗ್ಯಶ್ರೀ ಸಾಧನೆ ಮೆರೆದಿದ್ದಾರೆ.

ತಂದೆ ಕೇಶವ ಹುಟ್ಟು ಅಂಗವಿಕಲ. ಜೀವನಾಧಾರಕ್ಕೆ ಮನೆಯ ಪಕ್ಕದಲ್ಲಿಯೇ ಗೂಡಂಗಡಿ ಇಟ್ಟಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ಎರಡನೇ ಪುತ್ರಿ ಭಾಗ್ಯಶ್ರೀ ಅಂಗವೈಕಲ್ಯ, ಬಡತನವನ್ನು ಮೀರಿ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮೆರೆದಿದ್ದಾಳೆ.

ಭಾಗ್ಯಶ್ರಿ ಅವರ ಎರಡೂ ಕಾಲುಗಳು ಬಲಹೀನ‌. ಾದರೆ ಕಲಿಕೆಯಲ್ಲಿ ಭಾರೀ ಆಸಕ್ತಿ ಹೊಂದಿರುವ ಭಾಗ್ಯಶ್ರೀ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾಳೆ. ಎಸೆಸೆಲ್ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಬಂಟ್ವಾಳ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜನ್ನು ಸೇರಿದ ಭಾಗ್ಯಶ್ರೀ ಪಿಯುಸಿಯಲ್ಲೂ ಉತ್ತಮ ಅಂಕಗಳನ್ನು ಪಡೆದಿದ್ದಾಳೆ.

ಭಾಗ್ಯಶ್ರೀಗೆ ನಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವಳ ತಾಯಿ ಎತ್ತಿಕೊಂಡು ಬಂದು ಕಾಲೇಜಿಗೆ ಬಿಟ್ಟು ಹೋಗುತ್ತಾರೆ. ಸಂಜೆ ಮತ್ತೆ ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ವೀಲ್‌ಚೇರ್‌ನಲ್ಲೆ ಕುಳಿತ ಪಾಠ ಕೇಳುವ ಭಾಗ್ಯಶ್ರೀ ಕಾಲೇಜಿನ, ಶಿಕ್ಷಕರ ಪ್ರೀತಿಯ ವಿದ್ಯಾರ್ಥಿನಿ. ಸಹಪಾಠಿಗಳ ಮೆಚ್ಚಿನ ಗೆಳೆತಿಯೂ ಆಗಿದ್ದಾಳೆ.


ನನ್ನ 12 ವರ್ಷಗಳ ವಿದ್ಯಾಭ್ಯಾಸದಲ್ಲಿ ನನ್ನಗೆ ಬೆನ್ನೆಲುಬಾಗಿ ನಿಂತವರು ನನ್ನ ತಾಯಿ. ನನ್ನನ್ನು ಎತ್ತಿಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ನನ್ನ ತಾಯಿಯ ಸಹಾಯದಿಂದ ನಾನು ಇಷ್ಟು ಕಲಿಯಲು ಸಾಧ್ಯವಾಯಿತು. ಇನ್ನು ಮನೆಯಲ್ಲಿಯೇ ಇದ್ದು ದೂರ ಶಿಕ್ಷಣದಲ್ಲಿ ಬಿ.ಕಾಂ. ಕಲಿಯಬೇಕೆಂಬ ಆಸೆ ನನ್ನದು. ನನ್ನ ಸ್ನೇಹಿತರು, ಉಪನ್ಯಾಸಕರು ಕಲಿಕೆಗೆ ನನಗೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ.

- ಭಾಗ್ಯಶ್ರೀ, ವಿದ್ಯಾರ್ಥಿ‌ನಿ

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News