ಸಚಿನ್ ಪೈಲಟ್‌ಗೆ ಪಕ್ಷದ ಬಾಗಿಲು ಈಗಲೂ ತೆರೆದಿದೆ: ಅವಿನಾಶ್ ಪಾಂಡೆ

Update: 2020-07-15 07:25 GMT

ಹೊಸದಿಲ್ಲಿ, ಜು.15: ಸಚಿನ್ ಪೈಲಟ್‌ಗೆ ಈಗಲೂ ಪಕ್ಷದ ಬಾಗಿಲು ತೆರೆದಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಎಎನ್‌ಐಗೆ ತಿಳಿಸಿದ್ದಾರೆ.

"ಸಚಿನ್ ಪೈಲಟ್‌ಗೆ ದೇವರು ಬುದ್ದಿ ಕೊಡಲಿ. ಅವರು ಸರಕಾರವನ್ನು ಉರುಳಿಸಲು ಪ್ರಯತ್ನಿಸಬಾರದು. ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಮಾತುಕತೆಗೆ ಪಕ್ಷದ ಬಾಗಿಲು ಅವರಿಗೆ ಯಾವಾಗಲೂ,ಇಂದೂ ಕೂಡ ತೆರೆದಿದೆ. ಆದರೆ, ಅವರು ಎಲ್ಲವನ್ನೂ ಹಿಂದಿಕ್ಕಿ ಮುಂದೆ ಹೋಗಿರುವಂತೆ ಕಾಣುತ್ತಿದೆ'' ಎಂದರು.

ಸಚಿನ್ ತಾಳ್ಮೆ ಪ್ರದರ್ಶಿಸಬೇಕು: "ಸಚಿನ್ ಪೈಲಟ್ ತಾಳ್ಮೆ ಪ್ರದರ್ಶಿಸಬೇಕಾಗಿದೆ.ಅವರ ವರ್ತನೆಯು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ'' ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ಸಚಿನ್ ಪೈಲಟ್‌ರನ್ನು ಸಂಸದರನ್ನಾಗಿ ಮಾಡಿ ಕೇಂದ್ರ ಸಚಿವ ಸ್ಥಾನವನ್ನು ನೀಡಲಾಗಿತ್ತು. ರಾಜಸ್ಥಾನದಲ್ಲಿ ಪಕ್ಷದ ಮುಖ್ಯಸ್ಥರಾಗಿ ಹಾಗೂ ಉಪ ಮುಖ್ಯಮಂತ್ರಿಯನ್ನಾಗಿಯೂ ನೇಮಕ ಮಾಡಲಾಗಿತ್ತು. ಅವರೀಗ ತುಂಬಾ ಯುವಕರು.ಅವರು ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಅವರ ಕ್ರಮಗಳು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಇಂತಹ ಯುವಕರಲ್ಲಿ ತಾಳ್ಮೆ ಎಂಬುದಿಲ್ಲವಾಗಿದೆ'' ಎಂದು ಸುದ್ದಿಸಂಸ್ಥೆ ಪಿಟಿಐಗೆ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News