‘ಮೃತ’ ವ್ಯಕ್ತಿ ಬದುಕಿದ್ದಾನೆಂದು ಪತ್ತೆ ಹಚ್ಚಿದ ಛಾಯಾಗ್ರಾಹಕ!

Update: 2020-07-15 07:26 GMT

ಎರ್ಣಾಕುಳಂ: ಎರ್ಣಾಕುಳಂ ಮೂಲದ ಛಾಯಾಗ್ರಾಹಕ ಟಾಮಿ ಥಾಮಸ್ ಅವರಲ್ಲದೇ ಹೋಗಿದ್ದರೆ ಎಲ್ಲರೂ ಮೃತಪಟ್ಟಿದ್ದಾರೆ ಎಂದು ತಿಳಿದಿದ್ದ  ವ್ಯಕ್ತಿ  ಸೂಕ್ತ ಚಿಕಿತ್ಸೆ ದೊರೆಯದೆ ನಿಜವಾಗಿಯೂ ಕೊನೆಯುಸಿರೆಳೆಯುತ್ತಿದ್ದರು. 

ತಲೆಗೆ ಗಾಯವಾಗಿ ಕಲಮಸ್ಸೇರಿಯ ತನ್ನ ಮನೆಯಲ್ಲಿ ಅಂಗಾತ ಬಿದ್ದಿದ್ದ ಶಿವದಾಸನ್  ಸತ್ತಿದ್ದಾರೆಂದು ಎಲ್ಲರೂ ನಂಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕೂಡ ಸ್ಥಳಕ್ಕೆ ಬಂದು ಪಂಚನಾಮೆ ಸಿದ್ಧಪಡಿಸುತ್ತಿದ್ದರು. ಆ ಸಂದರ್ಭ ‘ಮೃತದೇಹ’ದ ಚಿತ್ರಗಳನ್ನು ತೆಗೆಯಲು ಥಾಮಸ್ ಅವರಿಗೆ ಕರೆ ಕಳುಹಿಸಿದ್ದರು.

ಶಿವದಾಸನ್ ಬಿದ್ದಿದ್ದ ಕೊಠಡಿಯಲ್ಲಿ ಕತ್ತಲಿದ್ದುದರಿಂದ ದೀಪ ಹಾಕಲೆಂದು ಸ್ವಿಚ್ ಹಾಕಲು ಬಗ್ಗಿದ್ದ  ಥಾಮಸ್ ಅವರಿಗೆ  ಏನೋ ಸದ್ದು ಕೇಳಿದಂತಾಗಿತ್ತು. ಅವರು ಪೊಲೀಸರಿಗೆ ಕೂಡಲೇ ತಿಳಿಸಿದ್ದು  ದೇಹವನ್ನು ಸರಿಯಾಗಿ ಮಲಗಿಸಿದಾಗ ಶಿವದಾಸನ್ ಕ್ಷೀಣವಾಗಿ ಉಸಿರಾಡುತ್ತಿರುವುದು ತಿಳಿದು ಬಂದು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆತ ಈಗ ತ್ರಿಶ್ಶೂರಿನ ಜುಬಿಲೀ ಮಿಷನ್ ಆಸ್ಪತ್ರೆಯ  ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶಿವದಾಸನ್ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು ಮೂರು ದಿನಗಳಿಂದ ಕೆಲಸಕ್ಕೇಕೆ ಬಂದಿಲ್ಲ ಎಂದು ವಿಚಾರಿಸಲು ಆತನ ಮಾಲಿಕ ಮನೆ ಪಕ್ಕ ಬಂದಾಗ  ಯಾರೂ ಬಾಗಿಲು ತೆರೆಯದೇ ಇದ್ದಾಗ ಕಿಟಕಿ ಮೂಲಕ ನೋಡಿದಾಗ ಆತ ಮನೆಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಕೋವಿಡ್ ಭಯದಿಂದ ಆಗ ಹತ್ತಿರದ ಮನೆಯವರ್ಯಾರೂ ಶಿವದಾಸನ್ ಹತ್ತಿರ ಹೋಗುವ ಧೈರ್ಯ ತೋರಿರಲಿಲ್ಲ. ಆತ ಸತ್ತೇ ಹೋಗಿದ್ದಾನೆಂದು ಎಲ್ಲರೂ ತಿಳಿದಿದ್ದರು. ಪೊಲೀಸರು ಕೂಡ ಆರಂಭದಲ್ಲಿ ಆತ ಸತ್ತಿದ್ದಾನೆಯೇ ಅಥವಾ ಬದುಕಿದ್ದಾನೆಯೇ ಎಂದು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದ ಶಿವದಾಸನ್ ತಲೆತಿರುಗಿ ಬಿದ್ದು ಮಂಚ ತಾಗಿ ತಲೆಗೆ ಗಾಯವಾಗಿತ್ತು ಎಂದು ಊಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News