‘ಯುವಕರ ಬಂಧನದಿಂದ ಹಿಂದೂ ಸಮುದಾಯದಲ್ಲಿ ಅಸಮಾಧಾನ’: ತನಿಖಾ ತಂಡಗಳಿಗೆ ಹೇಳಿದ ವಿಶೇಷ ಪೊಲೀಸ್ ಆಯುಕ್ತರು!

Update: 2020-07-15 08:01 GMT

ಹೊಸದಿಲ್ಲಿ : “ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಕೆಲ ಹಿಂದು ಯುವಕರ  ಬಂಧನ ಹಿಂದು ಸಮುದಾಯದಲ್ಲಿ ಸ್ವಲ್ಪ ಮಟ್ಟಿನ ಅಸಮಾಧಾನಕ್ಕೆ ಕಾರಣವಾಗಿದೆ  ಹಾಗೂ ಬಂಧನಗಳನ್ನು ನಡೆಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು'' ಎಂದು  ದಿಲ್ಲಿಯ ವಿಶೇಷ ಪೊಲೀಸ್ ಆಯುಕ್ತ (ಅಪರಾಧ)ರು  ತನಿಖಾ ತಂಡಗಳ ನೇತೃತ್ವ ವಹಿಸಿರುವ ಹಿರಿಯ ಅಧಿಕಾರಿಗಳಿಗೆ  ಪತ್ರ ಬರೆದು ತನಿಖಾಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದ್ದರು ಎಂದು indianexpress.com ವರದಿ ಮಾಡಿದೆ.

ದಿಲ್ಲಿ ಹಿಂಸಾಚಾರ ಕುರಿತಂತೆ ಪೊಲೀಸರು ತನಿಖೆ ಹಾಗೂ ಬಂಧನಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ಬಂದಿದೆ. ಜುಲೈ 8ರಂದು ನೀಡಲಾದ ಈ ಆದೇಶಕ್ಕೆ  ವಿಶೇಷ ಪೊಲೀಸ್ ಆಯುಕ್ತ (ಅಪರಾಧ ಮತ್ತು ಆರ್ಥಿಕ ಅಪರಾಧ ಘಟಕ) ಪ್ರವೀರ್ ರಂಜನ್ ಸಹಿ ಹಾಕಿದ್ದಾರೆ.

ಚಾಂದ್ ಬಾಘ್ ಹಾಗೂ ಖಜೂರಿ ಖಸ್ ಪ್ರದೇಶಗಳಿಂದ ಕೆಲ ಹಿಂದೂ ಯುವಕರ ಬಂಧನದಿಂದ ಅಸಮಾಧಾನವುಂಟಾಗಿದೆ ಎಂಬುದು ‘ಗುಪ್ತಚರ ಮಾಹಿತಿ’  ಮೂಲಕ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

“ಯಾವುದೇ ಆಧಾರವಿಲ್ಲದೆ ಬಂಧನ ನಡೆದಿದೆ ಹಾಗೂ ಕೆಲ ಬಂಧನಗಳು ವೈಯಕ್ತಿಕ ಕಾರಣಗಳಿಗಾಗಿ ನಡೆದಿವೆ ಎಂದು ಸಮುದಾಯದ ಮಂದಿ ಆರೋಪಿಸುತ್ತಿದ್ದಾರೆ'' ಎಂದು ಪತ್ರದಲ್ಲಿ ಬರೆಯಲಾಗಿದ್ದು, ಅದೇ ಪ್ರದೇಶದ ಇಬ್ಬರು ಮುಸ್ಲಿಂ ಯುವಕರು  ಹಿಂಸೆ ನಡೆಸಲು ಗುಂಪನ್ನು ಸೇರಿಸಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಕುರಿತು ಹಿಂದು ಸಮುದಾಯದಲ್ಲಿ ಅಸಹನೆಯಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News