ಏಶ್ಯನ್ ಅಭಿವೃದ್ಧಿ ಬ್ಯಾಂಕ್‌ಗೆ ಸೇರ್ಪಡೆಯಾಗಲು ಚುನಾವಣಾ ಆಯುಕ್ತ ಅಶೋಕ್ ಲಾವಸ ಸಜ್ಜು

Update: 2020-07-15 09:38 GMT

ಹೊಸದಿಲ್ಲಿ, ಜು.15: ಚುನಾವಣಾ ಆಯುಕ್ತ ಅಶೋಕ್ ಲಾವಸ ಫಿಲಿಪ್ಪೈನ್ಸ್ ಮೂಲದ ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ)ಉಪಾಧ್ಯಕ್ಷರಾಗಿ ಸೇರ್ಪಡೆಯಾಗಲು ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ.

 ಭಾರತದ ಚುನಾವಣಾ ಆಯುಕ್ತರಾಗಿ ಅಶೋಕ್‌ರಿಗೆ ಇನ್ನೂ ಎರಡು ವರ್ಷಗಳ ಅಧಿಕಾರವಧಿ ಬಾಕಿ ಇದೆ. ಅಶೋಕ್ 2022ರ ಅಕ್ಟೋಬರ್‌ನಲ್ಲಿ ಚುನಾವಣಾ ಆಯುಕ್ತರಾಗಿ(ಸಿಇಸಿ)ನಿವೃತ್ತಿಯಾಗಲಿದ್ದಾರೆ. ಅಶೋಕ್ ಚುನಾವಣಾ ಆಯೋಗದ ಇತಿಹಾಸದಲ್ಲಿ ಅವಧಿಗೆ ಮೊದಲೇ ಕಮಿಶನರ್ ಹುದ್ದೆಯಿಂದ ನಿರ್ಗಮಿಸಲಿರುವ ಎರಡನೇ ಅಧಿಕಾರಿಯಾಗಿದ್ದಾರೆ.

1973ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ನಾಗೇಂದ್ರ ಸಿಂಗ್ ತನ್ನ ಅವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದರು. ಇಂಟರ್‌ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಮೂಲಗಳ ಪ್ರಕಾರ, ಎಡಿಬಿಗೆ ಅಶೋಕ್ ನೇಮಕಾತಿಯನ್ನು ಕೇಂದ್ರ ಸರಕಾರದ ಒಪ್ಪಿಗೆಯೊಂದಿಗೆ ಅಂತಿಮಗೊಳಿಸಲಾಗಿದೆ.

  ಎಡಿಬಿಯು ಮೂರು ವರ್ಷಗಳ ಅವಧಿಗೆ ಉಪಾಧ್ಯಕ್ಷರನ್ನು ನೇಮಕ ಮಾಡುತ್ತದೆ. ಇದನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಬಹುದು. ಆರು ಉಪಾಧ್ಯಕ್ಷರುಗಳ ಆಡಳಿತ ತಂಡಕ್ಕೆ ಎಡಿಬಿ ಅಧ್ಯಕ್ಷರು ಮುಖ್ಯಸ್ಥರಾಗಿರುತ್ತಾರೆ.

 2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಕ್ಲೀನ್‌ಚಿಟ್ ನೀಡಲು ನಿರಾಕರಿಸುವುದರೊಂದಿಗೆ ಅಶೋಕ್ ಮುಖಪುಟ ಸುದ್ದಿಯಾಗಿದ್ದರು.

ಚುನಾವಣೆ ಮುಗಿದ ಬೆನ್ನಿಗೇ ಲಾವಸ ಅವರ ಪತ್ನಿ ಸೇರಿದಂತೆ ಅವರ ಕುಟುಂಬದವರ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು. ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿತ್ತು. ಲಾವಸ ಕುಟುಂಬ ಸದಸ್ಯರು ಐಟಿ ಇಲಾಖೆಯ ಆರೋಪವನ್ನು ನಿರಾಕರಿಸಿದ್ದರು.

ಲಾವಸ 2018ರ ಜನವರಿ 23ರಂದು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದು, ಅವರು ಹರ್ಯಾಣದ ಕೇಡರ್‌ನ(1980ರ ಬ್ಯಾಚ್)ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News