​ಆಕಾಶ ವೀಕ್ಷಕರಿಗೆ ಅಪರೂಪದ ‘ನಿಯೋವೈಸ್’ ಧೂಮಕೇತು ದರ್ಶನ

Update: 2020-07-15 11:37 GMT

ಉಡುಪಿ, ಜು.15: ಈ ವಾರ ಸಂಜೆಯಾಗುತ್ತಿದ್ದಂತೆ, ಪಶ್ಚಿಮ ಆಕಾಶದಲ್ಲಿ ಅಪರೂಪದ ಧೂಮಕೇತು ‘ನಿಯೋವೈಸ್’ ಬರೇ ಕಣ್ಣಿಗೆ ಕಾಣಿಸುತ್ತಿದೆ. ಅದೇ ಸಮಯಕ್ಕೆ ಪೂರ್ವ ಆಕಾಶದಲ್ಲಿ ವರ್ಷಕ್ಕೊಮ್ಮೆ ಭೂಮಿಗೆ ಸುಮಾರು 30 ಕೋಟಿ ಕಿಲೋ ಮೀಟರ್‌ನಷ್ಟು ಹತ್ತಿರ ಬರುವ ಗುರುಗ್ರಹ ಹಾಗೂ ಶನಿಗ್ರಹ ಭೂಮಿಗೆ ಹತ್ತಿರ ಬಂದು ತುಂಬಾ ಚೆಂದ ಹೊಳೆಯುತ್ತಾ ಕಾಣಿಸುತ್ತಿವೆ.

ಇತ್ತೀಚಿಗಷ್ಟೇ ಗುರುತಿಸಿದ ‘ನಿಯೋವೈಸ್’ ಧೂಮಕೇತು ಸೂರ್ಯನ ಸುತ್ತು ಮುಗಿಸಿ ಜುಲೈ 23ರಂದು ಭೂಮಿಗೆ ತೀರಾ ಸಮೀಪದಲ್ಲಿ (ಸುಮಾರು ಹತ್ತು ಕೋಟಿ ಮೂವತ್ತು ಲಕ್ಷ ಕಿಮೀ) ಹಾದು ಹೋಗಲಿದೆ. ಈ ಧೂಮಕೇತು ಜುಲೈ 25ರವರೆಗೆ ಪಶ್ಚಿಮ ಆಕಾಶದಲ್ಲಿ ಸಂಜೆಯಾದೊಡನೆ ಬರೀ ಕಣ್ಣಿಗೆ ಕಾಣಿಸುತ್ತದೆ.

ನೋಡಲು ಚೆಂದ: ಸೂರ್ಯನಿಂದ ಅತೀ ಹೊರವಲಯದಲ್ಲಿ ಅನಂತ ಆಕಾಶದಲ್ಲಿ, ಸೂರ್ಯನ ಸುತ್ತ ಅಲೆಯುವ (ಸುಮಾರು 15000 ಕೋಟಿ ಕೀಮೀ ಊರ್ಸ್ ಕ್ಲೌಡ್) ಇದು ಅತಿ ಶೀತಲದ ಕಲ್ಲುಂಡೆ. ಇದು ಈಗ ಸೂರ್ಯನ ಸಮೀಪಕ್ಕೆ ಬರುತ್ತಿದೆ.
ಸುಮಾರು 5 ಕಿ.ಮೀ. ವ್ಯಾಸದ ಈ ಧೂಮಕೇತುವಿಗೆ, ಸೂರ್ಯನನ್ನು ಸಮಿಪಿಸುತ್ತಿದ್ದಂತೆ ಲಕ್ಷ ಕಿ.ಮೀ ಉದ್ದದ ಬಾಲ ಬೆಳೆಯುತ್ತದೆ. ಅದೇ ಧೂಮಕೇತುಗಳ ವಿಶೇಷ. ಈ ಬಾಲ ಬೇರೇನೂ ಅಲ್ಲ, ಸೂರ್ಯನ ಬಿಸಿ ಕಿರಣಗಳಿಂದ ಧೂಮಕೇತುವಿನ ಮೇಲಿನ ಕರಗಿದ ತೇವಾಂಶ ಹಾಗೂ ಅನಿಲವಷ್ಟೆ ಆಗಿವೆ.

ಸೂರ್ಯನಿಂದ ಸರಾಸರಿ 74 ಕೋಟಿ ಕಿ.ಮೀ. ದೂರದಲ್ಲಿರುವ ಗುರುಗ್ರಹ ಯಾವಾಗಲೂ ಭೂಮಿಗೆ ಒಂದೇ ದೂರದಲ್ಲಿರುವುದಿಲ್ಲ. ವರ್ಷಕ್ಕೊಮ್ಮೆ ಸುಮಾರು 59 ಕೋಟಿ ಕಿ.ಮೀ. ದೂರದಲ್ಲಿದ್ದರೆ, ಮತ್ತೆ ಆರು ತಿಂಗಳ ನಂತರ ಸುಮಾರು 89 ಕೋಟಿ ಕೀಮೀ ದೂರದಲ್ಲಿರುತ್ತದೆ. ಅದು ಭೂಮಿಗೆ ಹತ್ತಿರ ಬಂದಾಗ ದೊಡ್ಡದಾಗಿ ಕಂಡುಬರುತ್ತದೆ.

ಶನಿಗ್ರಹ ಸೂರ್ಯನ ಸುತ್ತು ಸುಮಾರು 140 ಕೋಟಿ ಕಿ.ಮೀ ದೂರದಲ್ಲಿ ಸುತ್ತುತ್ತಿದ್ದರೂ ಭೂಮಿಗೆ ಸಮೀಪ ಬಂದಾಗ ವರ್ಷಕ್ಕೊಮ್ಮೆ 125 ಕೋಟಿ ಕಿಮೀ ಇದ್ದು, ಅರು ತಿಂಗಳ ನಂತರ ಸುಮಾರು 165 ಕೋಟಿ ಕಿ.ಮೀ ದೂರದಲ್ಲಿ ಇರುತ್ತದೆ.

ಈ ವಾರದಲ್ಲಿ ಈ ಎರಡೂ ಗ್ರಹಗಳು ಭೂಮಿಗೆ ತೀರಾ ಹತ್ತಿರಕ್ಕೆ ಬರುವುದರಿಂದ ಪೂರ್ವ ಆಕಾಶದಲ್ಲಿ ಸಂಜೆ ವ್ರಶ್ಚಿಕ ರಾಶಿಯ ಬುಡದಲ್ಲಿ ಚೆನ್ನಾಗಿ ಹೊಳೆಯುತ್ತವೆ.

ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಸಪ್ತರ್ಷಿ ಮಂಡಲದ ಕೆಳಗೆ ಗೋಚರಿಸುವ ನಿಯೋವೈಸ್ ಧೂಮಕೇತುವನ್ನು ಹಾಗೂ ಸೌರಮಂಡಲದ ಎರಡು ದೈತ್ಯ ಗ್ರಹಗಳು ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಪ್ರಕಾಶಮಾನವಾಗಿ ಹೊಳೆಯುವ ವಿದ್ಯಮಾನಗಳನ್ನು ಎಲ್ಲರೂ ಯಾವುದೇ ಅಪಾಯಗಳಿಲ್ಲದೇ, ಬರಿಗಣ್ಣಿನಲ್ಲಿ ತಪ್ಪದೇ ವೀಕ್ಷಿಸುವಂತೆ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಡಾ.ಎ.ಪಿ.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News