ಸಕ್ಕರೆ ಕನಿಷ್ಟ ಮಾರಾಟ ಬೆಲೆ 2 ರೂ. ಹೆಚ್ಚಳಕ್ಕೆ ಶಿಫಾರಸು

Update: 2020-07-15 17:06 GMT

ಹೊಸದಿಲ್ಲಿ, ಜು.15: ಸಕ್ಕರೆಯ ಕನಿಷ್ಟ ಮಾರಾಟ ಬೆಲೆಯಲ್ಲಿ 2 ರೂ. ಹೆಚ್ಚಳ ಮಾಡಿ 33 ರೂ.ಗೆ ನಿಗದಿಗೊಳಿಸುವಂತೆ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ತಂಡವು ಬುಧವಾರ ಶಿಫಾರಸು ಮಾಡಿದೆ . ಇದರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಗೆ ಬಾಕಿ ಇರುವ ಸುಮಾರು 20,000 ಕೋಟಿ ರೂ. ಹಣದ ಶೀಘ್ರ ಪಾವತಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಹಾರ ಸಚಿವ ರಾಮವಿಲಾಸ್ ಪಾಸ್ವಾನ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. 2019-20ರ ಅವಧಿಯಲ್ಲಿ ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 20,000 ಕೋಟಿ ರೂ. ಪಾವತಿಗೆ ಬಾಕಿಯಿದ್ದು ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನೀತಿ ಆಯೋಗ ಶಿಫಾರಸು ಮಾಡಿದಂತೆ, ಸಕ್ಕರೆ ಕನಿಷ್ಟ ಮಾರಾಟ ಬೆಲೆಯಲ್ಲಿ 2 ರೂ. ಹೆಚ್ಚಳ ಮಾಡಿ 33ರೂ.ಗೆ ನಿಗದಿಗೊಳಿಸಬೇಕೆಂಬ ಶಿಫಾರಸಿನೊಂದಿಗೆ ಸಚಿವ ಸಂಪುಟದ ಟಿಪ್ಪಣಿಯನ್ನು ಮಂಡಿಸುವಂತೆ ಸಚಿವರ ತಂಡವು ಆಹಾರ ಸಚಿವಾಲಯಕ್ಕೆ ನಿರ್ದೇಶಿಸಿದೆ . ಕನಿಷ್ಟ ಮಾರಾಟ ಬೆಲೆಯನ್ನು ಹೆಚ್ಚಿಸಿದರೂ ಇದರಿಂದ ಕಬ್ಬು ಬೆಳೆಗಾರರ ಅಗಾಧ ಪ್ರಮಾಣದ ಬಾಕಿಯನ್ನು ತಗ್ಗಿಸಲು ಸಾಧ್ಯವಾಗದಿದ್ದರೆ ಕೈಗೊಳ್ಳಬೇಕಾದ ಪರ್ಯಾಯ ಮಾರ್ಗಗಳ ಬಗ್ಗೆಯೂ ಸರಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನೀತಿ ಆಯೋಗ ರಚಿಸಿರುವ ಕಾರ್ಯಪಡೆಯು ಸಕ್ಕರೆ ಕನಿಷ್ಟ ಮಾರಾಟ ಬೆಲೆಯಲ್ಲಿ 2 ರೂ. ಹೆಚ್ಚಿಸಲು ಶಿಫಾರಸು ಮಾಡಿದೆ. ಕಳೆದ ವರ್ಷ ಸರಕಾರ ಸಕ್ಕರೆ ಕನಿಷ್ಟ ಮಾರಾಟ ಬೆಲೆಯನ್ನು 2 ರೂ. ಹೆಚ್ಚಿಸಿತ್ತು. ಸರಕಾರದ ಮೂಲಗಳ ಪ್ರಕಾರ, 2019-20ರ ಅವಧಿಯಲ್ಲಿ ಸಕ್ಕರೆ ಮಿಲ್ಗಳು ಸುಮಾರು 72,000 ಕೋಟಿ ರೂ. ಮೊತ್ತದ ಕಬ್ಬನ್ನು ರೈತರಿಂದ ಖರೀದಿಸಿದ್ದು ಇದರಲ್ಲಿ ಸುಮಾರು 20,000 ಕೋಟಿ ರೂ. ಪಾವತಿಗೆ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News