ಲಾಕ್‌ಡೌನ್ ನಡುವೆಯೂ ಮಂಗಳೂರಿನಲ್ಲಿ ವಾಹನ ಸಂಚಾರ ನಿರಾತಂಕ

Update: 2020-07-16 05:35 GMT

ಮಂಗಳೂರು, ಜು.16: ಕೊರೋನ ಸೋಂಕಿನ ನಿಯಂತ್ರಣದ ಸಲುವಾಗಿ ದ.ಕ. ಜಿಲ್ಲೆಯಾದ್ಯಂತ ಜು. 23ರವರೆಗೆ ಘೋಷಿಸಲಾಗಿರುವ ಲಾಕ್‌ಡೌನ್ ನಡುವೆಯೂ ನಗರದಲ್ಲಿ ವಾಹನ ಸಂಚಾರ ನಿರಾತಂಕವಾಗಿದೆ.

ಬೆಳಗ್ಗೆ 8ರಿಂದ 11 ಗಂಟೆಯವರೆಗೆ ದಿನಸಿ ಹಾಗೂ ಅಗತ್ಯ ಸಾಮಗ್ರಿಗಳ ಖರೀದಿಗೆ ವಿನಾಯಿತಿ ನೀಡಿರುವುದರಿಂದ ನಗರದಲ್ಲಿ ಖಾಸಗಿ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿವೆ. ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರೂ ಏಕಮುಖವಾಗಿ ಕೆಲವೊಂದು ವಾಹನಗಳು ತಪಾಸಣೆಯಿಲ್ಲದೆ ಸಂಚರಿಸುತ್ತಿವೆ. ನಗರ ಪ್ರವೇಶಿಸುವ ಜಪ್ಪಿನಮೊಗರು, ಪಂಪ್‌ವೆಲ್, ಅಂಬೇಡ್ಕರ್ ವೃತ್ತ, ಕ್ಲಾಕ್‌ ಟವರ್ ಸೇರಿದಂತೆ ನಗರದ ಸುತ್ತಮುತ್ತ ಕಾರು, ರಿಕ್ಷಾ, ದ್ವಿಕ್ರ ವಾಹನಗಳು ಸಂಚರಿಸುತ್ತಿವೆ.

ಮಾಲ್‌ಗಳು, ಖಾಸಗಿ ಹಾಗೂ ವಾಣಿಜ್ಯ ಸಂಸ್ಥೆಗಳು, ಬಾರ್ ಮತ್ತು ವೈನ್ ಶಾಪ್‌ಗಳು ಬಂದ್ ಆಗಿದ್ದು, ಖಾಸಗಿ ಸಾರ್ವಜನಿಕ ಸಂಚಾರದ ವಾಹನಗಳು ರಸ್ತೆಗಳಿದಿಲ್ಲ.

ನಗರದ ಒಳ ಭಾಗಗಳ ದಿನಸಿ ಸೇರಿದಂತೆ ಕೆಲವು ಅಂಗಡಿಗಳು ತೆರೆದಿದ್ದರೆ ನಗರದ ಪ್ರಮುಖ ರಸ್ತೆಗಳಲ್ಲಿನ ಬೆರಳೆಣಿಕೆಯ ಅಂಗಡಿಗಳು ಮಾತ್ರವೇ ತೆರೆದಿವೆ. ಸೂಪರ್ ಮಾರುಕಟ್ಟೆಗಳು, ತರಕಾರಿ, ಮೀನು ಮಾಂಸದ ಅಂಗಡಿಗಳು ಕೆಲವೊಂದು ತೆರೆದಿದ್ದು, ಗ್ರಾಹಕರ ಸಂಖ್ಯೆ ವಿರಳವಾಗಿದೆ. ಕೊರೋನ ಆತಂಕ ಹಾಗೂ ಭಾರೀ ಮಳೆಯ ನಡುವೆಯೂ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಪಹರೆ ನೀಡುತ್ತಿದ್ದಾರೆ. 

ಗ್ರಾಹಕರೇ ಇಲ್ಲ!

ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮೀನು, ತರಕಾರಿ ಮಾಂಸ ಖರೀದಿಗೆ ಅವಕಾಶ ನೀಡಲಾಗಿದ್ದರೂ ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಮೀನುಗಾರರು ಮೀನು ಮಾರಾಟಕ್ಕೆ ಬಂದಿದ್ದರೂ, ಕೊಳ್ಳಲು ಗ್ರಾಹಕರೇ ಇಲ್ಲದೆ ಮನೆಗೆ ಹಿಂತಿರುಗಿದರು. ‘‘11 ಗಂಟೆಯವರೆಗೆ ಅವಕಾಶ ಇರುವುದರಿಂದ ಗ್ರಾಹಕರು ಬರಬಹುದೆಂದು ಸ್ವಲ್ಪ ಮೀನು ಖರೀದಿಸಿ ವ್ಯಾಪಾರಕ್ಕೆ ಬಂದಿದ್ದೇವೆ. ಆದರೆ ಗ್ರಾಹಕರೇ ಇಲ್ಲ. ಈಗ ಹಿಂತಿರುತ್ತಿದ್ದೇವೆ’’ ಎಂದು ಮೀನು ವ್ಯಾಪಾರಿ ಮಹಿಳೆಯೊಬ್ಬರು ‘ವಾರ್ತಾಭಾರತಿ’ ಪ್ರತಿನಿಧಿ ಜತೆ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಮೀನು ಮಾರುಕಟ್ಟೆ ಹೊರಗಡೆ ಒಂದಿಬ್ಬರು ತರಕಾರಿ ಮಾರಾಟಗಾರರು ವ್ಯಾಪಾರಕ್ಕೆ ಮುಂದಾಗಿದ್ದರೂ ಗ್ರಾಹಕರು ಮಾತ್ರ ಸಿಗಲಿಲ್ಲ.

ಇದು ಯಾವ ರೀತಿಯ ಲಾಕ್‌ಡೌನ್?
ಒಂದೆಡೆ ಖಾಸಗಿ ವಾಹನಗಳು ಸುತ್ತಾಡುವಂತಿಲ್ಲ ಅನ್ನುತ್ತಾರೆ. ಇನ್ನೊಂದೆಡೆ 8 ಗಂಟೆಯಿಂದ 11 ಗಂಟೆಯವರೆಗೆ ದಿನಸಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಎನ್ನುತ್ತಾರೆ. ಖಾಸಗಿ, ವಾಣಿಜ್ಯ ಸಂಸ್ಥೆಗಳು ಬಾಗಿಲು ತೆರೆಯುವಂತಿಲ್ಲ. ಸಂಪೂರ್ಣ ಬಂದ್ ಎಂದು ಹೇಳಿದರೆ ಯಾರೂ ಬರುವುದಿಲ್ಲ. ಈ ರೀತಿ ಅರ್ಧಂಬರ್ಧ ಲಾಕ್‌ಡೌನ್ ಯಾವ ಉದ್ದೇಶಕ್ಕಾಗಿ ಎಂದು ನಗರದ ಸ್ಟೇಟ್‌ಬ್ಯಾಂಕ್ ಖರೀದಿಗೆಂದು ಬಂದಿದ್ದ ಸಾರ್ವಜನಿಕರೊಬ್ಬರು ಪ್ರಶ್ನಿಸುತ್ತಾರೆ.

ಭಾರೀ ಮಳೆ... ರಸ್ತೆಯಲ್ಲಿ ಮಳೆ ನೀರು...!
ಲಾಕ್‌ಡೌನ್ ನಡುವೆಯೇ ನಗರದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಇಂದು ಕೂಡಾ ಭಾರೀ ಮಳೆ ಮುಂದುವರಿದಿದ್ದು, ನಗರದ ರಾವ್ ಎಂಡ್ ರಾವ್ ವೃತ್ತ, ಕೆ.ಎಸ್.ಆರ್. ರಾವ್ ರಸ್ತೆಯ ಬಳಿಯ ಮಾಲ್ ಎದುರುಗಡೆ ಮಳೆ ನೀರು ರಸ್ತೆಯಲ್ಲೇ ಧಾರಾಕಾರವಾಗಿ ಹರಿದು ಹೋಗುತ್ತಿದೆ. ರಸ್ತೆಯಲ್ಲೇ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಅತೀ ವಿರಳವಾಗಿರುವುದರಿಂದ ತೊಂದರೆಯಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News