ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್: ಪೊಲೀಸರಿಂದ ತಪಾಸಣೆ ಆರಂಭ, ಮಾಸ್ಕ್ ಧರಿಸಲು ಮನವಿ

Update: 2020-07-16 06:59 GMT

ಮಂಗಳೂರು, ಜು.16: ದ.ಕ. ಜಿಲ್ಲೆಯಾದ್ಯಂತ ಲಾಕ್‌ಡೌನ್ ಹಿನ್ನೆಲೆಯ ನಡುವೆಯೂ ನೀಡಲಾಗಿದ್ದ ವಿನಾಯಿತಿ ಅವಧಿ 11 ಗಂಟೆಗೆ ಮುಗಿಯುತ್ತಿದ್ದಂತೆಯೇ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ.

ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ತಡೆದು ಹಿಂದಕ್ಕೆ ಕಳುಹಿಸುತ್ತಿರುವ ಪೋಲೀಸರು ಧ್ವನಿ ವರ್ಧಕ ಮೂಲಕ ಮನೆಯಲ್ಲಿಯೇ ಇರುವಂತೆ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

ನಗರದ ಪಂಪ್‌ವೆಲ್, ಜಪ್ಪಿನಮೊಗರು, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳ ಮೂಲಕ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿರುವ ಪೊಲೀಸರು ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ. ವಿಶೇಷವೆಂದರೆ ನಗರ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾಸ್ಕ್ ಧರಿಸಲು ಮನವಿ
ನಗರದಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ, ವಾಹನ ಚಾಲಕರು ಹಾಗೂ ವಾಹನದಲ್ಲಿರುವವರು ಮಾಸ್ಕ್ ಹಾಕದಿದ್ದಲ್ಲಿ ಅಥವಾ ಸರಿಯಾಗಿ ಹಾಕದಿದ್ದಲ್ಲಿ ಮಾಸ್ಕ್ ಹಾಕುವಂತೆ ಮನವಿಯ ಜತೆಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ.

ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿ, ಅನಗತ್ಯವಾಗಿ ಸುತ್ತಾಡಬೇಡಿ, ಮನೆಯಿಂದ ಹೊರಗೆ ಬರಬೇಡಿ, ಲಾಕ್‌ಡೌನ್‌ನ ಉದ್ದೇಶ ಅರ್ಥಮಾಡಿಕೊಂಡು ಸಹಕರಿಸಿ ಎಂದು ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News