ಒಬಾಮಾ, ಬಿಲ್ ಗೇಟ್ಸ್ ಸೇರಿ ಹಲವು ಪ್ರಮುಖರ ಟ್ವಿಟರ್ ಖಾತೆ ಹ್ಯಾಕ್ !

Update: 2020-07-16 14:33 GMT

ಹೊಸದಿಲ್ಲಿ: ಬಿಟ್ ಕಾಯಿನ್ ಆಫರ್ ಗಳನ್ನು ಪ್ರಕಟಿಸಲು ಹ್ಯಾಕರ್ ಗಳು ಇಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಜೋ ಬೈಡನ್, ಎಲಾನ್ ಮಸ್ಕ್ ಸೇರಿ ಹಲವು ಪ್ರಮುಖರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿರುವ ವಿಚಿತ್ರ ವಿದ್ಯಮಾನ ನಡೆದಿದೆ.

ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ , ಮ್ಯೂಸಿಶಿಯನ್ ಕಾನ್ಯೆ ವೆಸ್ಟ್ , ಉಬರ್ ಮತ್ತು ಆ್ಯಪಲ್ ಗಳ ಟ್ವಿಟರ್ ಖಾತೆಗಳಲ್ಲಿ ಇಂತಹದ್ದೇ ಪೋಸ್ಟ್ ಗಳು ಕಾಣಿಸಿಕೊಂಡಿವೆ. ಒಂದು ಬಿಟ್ ಕಾಯಿನ್ ವಿಳಾಸಕ್ಕೆ ಕ್ರಿಪ್ಟೋಕರೆನ್ಸಿಯನ್ನು ಕಳುಹಿಸುವಂತೆ ಅದರಲ್ಲಿ ತಿಳಿಸಲಾಗಿದೆ.

ಎಲಾನ್ ಮಸ್ಕ್ ಖಾತೆಯಲ್ಲಿ ಕಾಣಿಸಿಕೊಂಡ ಟ್ವೀಟ್ ಹೀಗಿತ್ತು: ‘‘ಶುಭ ಬುಧವಾರ! ನಾನು ನನ್ನ ಎಲ್ಲ ಫಾಲೋವರ್ಗಳಿಗೆ ಬಿಟ್ಕಾಯಿನ್ಗಳನ್ನು ಮರಳಿ ಕೊಡುತ್ತಿದ್ದೇನೆ. ಕೆಳಗಿನ ಬಿಟ್ಕಾಯಿನ್ ವಿಳಾಸಕ್ಕೆ ಕಳುಹಿಸಲಾಗುವ ಎಲ್ಲ ಪಾವತಿಗಳಿಗೆ ನಾನು ದುಪ್ಪಟ್ಟು ಮರುಪಾವತಿ ಮಾಡುತ್ತೇನೆ. ನೀವು 0.1 ಬಿಟಿಸ್ (ಬಿಟ್ಕಾಯಿನ್) ಕಳುಹಿಸಿ, ನಾನು ತಿರುಗಿ ನಿಮಗೆ 0.2 ಬಿಟಿಸಿ ಕಳುಹಿಸುತ್ತೇನೆ!’’ ಈ ಕೊಡುಗೆ ಕೇವಲ 30 ನಿಮಿಷಗಳವರೆಗೆ ಮಾತ್ರ’’.
ಇದರ ಬೆನ್ನಿಗೇ, ‘‘ಇದೊಂದು ಹಗರಣ, ಇದರಲ್ಲಿ ಭಾಗವಹಿಸಬೇಡಿ!’’ ಎಂಬುದಾಗಿ ಜೆಮಿನಿ ಕ್ರಿಪ್ಟೊಕರೆನ್ಸಿ ಎಕ್ಸ್ ಚೇಂಜ್ ಸಹಸಂಸ್ಥಾಪಕ ಕ್ಯಾಮರೂನ್ ವಿಂಕ್ಲೆವೊಸ್ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಎಚ್ಚರಿಸಿದರು.
ಅದೇ ವೇಳೆ, ಅಸಾಧಾರಣ ಕ್ರಮವೊಂದರಲ್ಲಿ, ಟ್ವಿಟರ್ ಹಲವಾರು ಮಂದಿಯ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿ, ಅವುಗಳಿಂದ ಟ್ವೀಟ್ ಮಾಡಲು ಸಾಧ್ಯವಾಗದಂತೆ ಮಾಡಿತು.


ಅತ್ಯಂತ ಕಠಿಣ ದಿನ: ಟ್ವಿಟರ್ ಸಿಇಒ


“ಇದು ನಮಗೆ ಅತ್ಯಂತ ಕಠಿಣ ದಿನವಾಗಿತ್ತು” ಎಂಬುದಾಗಿ ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜಾಕ್ ಡೊರ್ಸಿ ಪ್ರತಿಕ್ರಿಯಿಸಿದ್ದಾರೆ.
“ಇದು ಸಂಭವಿಸಿರುವುದಕ್ಕೆ ನಮಗೆ ಆಘಾತವಾಗಿದೆ. ನಾವು ಅದರ ಮೂಲವನ್ನು ಪತ್ತೆಹಚ್ಚುತ್ತಿದ್ದೇವೆ. ಏನು ನಡೆಯಿತು ಎಂಬ ಬಗ್ಗೆ ನಮಗೆ ಸಂಪೂರ್ಣ ಚಿತ್ರಣ ಸಿಕ್ಕಿದ ಬಳಿಕ ಎಲ್ಲವನ್ನೂ ನಾವು ಹಂಚಿಕೊಳ್ಳುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News