ಚಬಹಾರ್ ರೈಲ್ವೆ ಯೋಜನೆಯಲ್ಲಿ ಭಾರತದೊಂದಿಗೆ ಒಪ್ಪಂದ ನಡೆದಿಲ್ಲ: ಇರಾನ್

Update: 2020-07-16 14:20 GMT

ಟೆಹರಾನ್ (ಇರಾನ್), ಜು. 16: ಚಬಹಾರ್-ಝಹೆದನ್ ರೈಲ್ವೇ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂಬ ಭಾರತದ ಮಾಧ್ಯಮಗಳ ವರದಿಯನ್ನು ಇರಾನ್ ನಿರಾಕರಿಸಿದೆ.

“ಪತ್ರಿಕೆಯ ವರದಿಯು ಸಂಪೂರ್ಣ ಸುಳ್ಳು. ಚಬಹಾರ್-ಝಹೆದನ್ ರೈಲ್ವೇ ಯೋಜನೆಗೆ ಸಂಬಂಧಿಸಿ ಇರಾನ್ ಭಾರತದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ” ಎಂದು ಇರಾನ್ ಬಂದರುಗಳು ಮತ್ತು ಸಮುದ್ರತೀರ ಸಂಘಟನೆಯ ಸದಸ್ಯರಲ್ಲೊಬ್ಬರಾದ ಫರ್ಹಾದ್ ಮೊಂಟಾಸಿರ್ ಹೇಳಿದ್ದಾರೆ ಎಂದು ‘ಅಲ್ ಜಝೀರ’ ವರದಿ ಮಾಡಿದೆ.

“ಚಬಹಾರ್ ನಲ್ಲಿ ಹೂಡಿಕೆ ಮಾಡುವುದಕ್ಕಾಗಿ ಇರಾನ್ ಭಾರತದೊಂದಿಗೆ ಕೇವಲ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ. ಒಂದು, ಬಂದರಿನ ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಗೆ ಸಂಬಂಧಿಸಿದ್ದು, ಹಾಗೂ ಎರಡನೆಯದು ಭಾರತದ 150 ಮಿಲಿಯ ಡಾಲರ್ (ಸುಮಾರು 1,130 ಕೋಟಿ ರೂಪಾಯಿ) ಹೂಡಿಕೆಗೆ ಸಂಬಂಧಿಸಿದ್ದು” ಎಂದು ಮೊಂಟಾಸಿರ್ ತಿಳಿಸಿದ್ದಾರೆ.

ಚಬಹಾರ್ ನಲ್ಲಿನ ಇರಾನ್-ಭಾರತ ಸಹಕಾರಕ್ಕೂ ಅಮೆರಿಕ ವಿಧಿಸಿರುವ ದಿಗ್ಬಂಧನಗಳಿಗೂ ಸಂಬಂಧವಿಲ್ಲ ಎಂದು ಅವರು ನುಡಿದರು.

2012ರ ಇರಾನ್ ಫ್ರೀಡಂ ಆ್ಯಂಡ್ ಕೌಂಟರ್-ಪ್ರೊಲಿಫರೇಶನ್ ಕಾಯ್ದೆ (ಐಎಫ್ಸಿಎ)ಯನ್ವಯ, ಚಬಹಾರ್ ಬಂದರು ಯೋಜನೆಗಳಿಗೆ ಸಂಬಂಧಿಸಿ ಭಾರತಕ್ಕೆ ವಿನಾಯಿತಿ ನೀಡಲು 2018ರಲ್ಲಿ ಅಮೆರಿಕ ಒಪ್ಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News